ಪತ್ನಿಯ ಕತ್ತು ಸೀಳಿ ಕೊಲೆ!

ಗುವಾಹತಿ, ಜೂ.16-ತನ್ನ ಮಗಳ ಮೇಲೇ ಅತ್ಯಾಚಾರ ಎಸಗಿ ಜೈಲು ಶಿಕ್ಷೆ ಅನುಭವಿಸಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ಭೀಕರ ಘಟನೆ ಈಶಾನ್ಯ ರಾಜ್ಯ ಅಸ್ಸಾಂನ ನ್ಯಾಯಾಲಯವೊಂದರ ಆವರಣದಲ್ಲಿ ನಿನ್ನೆ ನಡೆದಿದೆ. ದಿಬ್ರುಗಢ್ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಆವರಣದಲ್ಲಿ ಈ ಕೃತ್ಯ ನಡೆದಿದ್ದು, ಪತ್ನಿ ಹಂತಕ ಪೂರ್ಣ ನಹಾರ್ ಡೇಕಾನನ್ನು ಹಿಡಿದು ಪೆÇಲೀಸರಿಗೆ ಒಪ್ಪಿಸಿದ್ದಾರೆ. ರೀಟಾ ನಹಾರ್ ಡೇಕಾ ಈತನ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ.
ತನ್ನ ಪುತ್ರಿ ಮೇಲೆ ಅತ್ಯಾಚಾರ ಎಸಗಿದ ಆಪಾದನೆಗಾಗಿ ಒಂಭತ್ತು ತಿಂಗಳ ಕಾಲ ಪೂರ್ಣ ನಹಾರ್ ಜೈಲು ಶಿಕ್ಷೆ ಅನುಭವಿಸಿ ಕೆಲವು ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ನಿನ್ನೆ ಕೋರ್ಟ್‍ನಲ್ಲಿ ಈ ಪ್ರಕರಣದ ವಿಚಾರಣೆ ಇತ್ತು. ಈತನ ವಿರುದ್ಧ ದೂರು ದಾಖಲಿಸಿದ್ದ ಪತ್ನಿಯೂ ಸಹ ವಿಚಾರಣೆಗೆ ಬಂದಿದ್ದರು.
ಕೋರ್ಟ್ ಆವರಣದ ಕಾರಿಡಾರ್‍ನಲ್ಲಿ ಹಠಾತ್ತನೇ ಪತ್ನಿಯ ಮೇಲೆರಗಿದ ಡೇಕಾ ತನ್ನ ಜೇಬಿನಲ್ಲಿದ್ದ ಚಾಕುವಿನಿಂದ ಆಕೆಯ ಗಂಟಲು ಸೀಳಿ ಭೀಕರವಾಗಿ ಕೊಲೆ ಮಾಡಿದ ಎಂದು ದಿಬ್ರುಗಢ ಡಿಎಸ್ಪಿ ಪ್ರದೀಪ್ ಸೈಕಿಯಾ ತಿಳಿಸಿದ್ದಾರೆ. ತನ್ನ ಪತ್ನಿಯನ್ನು ಕೊಲ್ಲುವುದಕ್ಕೆ ಮೊದಲು ಆಕೆ ಜೊತೆ ಈತ ಜಗಳವಾಡಿದ. ನಂತರ ಕತ್ತು ಕೊಯ್ಡು ಪರಾರಿಯಾಗಲು ಯತ್ನಿಸಿ, ಕೋರ್ಟ್ ಆವರಣದಲ್ಲಿದ್ದ ಜನರು ಆತನನ್ನು ಹಿಡಿದು ಪೆÇಲೀಸರಿಗೆ ಒಪ್ಪಿಸಿದರು. ತೀವ್ರ ರಕ್ತಸ್ರಾವದಿಂದ ರೀಟಾ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದರು ಎಂದು ದಿಬ್ರುಗಢ ಠಾಣೆ ಇನ್ಸ್‍ಪೆಕ್ಟರ್ ಸಿಧೇಶ್ವರ್ ಬೋರ್ಹಾ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ