ಇಸ್ಲಾಮಾಬಾದ್, ಜೂ14-ಮುಂಬೈ ದಾಳಿಯ ಪ್ರಮುಖ ಸೂತ್ರದಾರಿ ಮತ್ತು ಕುಪ್ರಸಿದ್ಧ ಭಯೋತ್ಪಾದಕ ಹಫೀಜ್ ಸಯೀದ್‍ಗೆ ಸೇರಿದ ಮಿಲ್ಲಿ ಮುಸ್ಲಿಂ ಲೀಗ್(ಎಂಎಂಎಲ್) ಮುಂಬರುವ ಸಾರ್ವಜನಿಕ ಚುನಾವಣೆಯಲ್ಲಿ ಅಲ್ಲಾ-ಓ-ಅಕ್ಬರ್ ತೆಹ್ರೀಕ್ (ಎಎಟಿ) ಹೆಸರಿನಲ್ಲಿ ಕಣಕ್ಕಿಳಿಯಲು ನಿರ್ಧರಿಸಿದೆ.
ಹಫೀಜ್‍ನ ನಿಷೇಧಿತ ಜಮಾತ್-ಉದ್-ದವಾ(ಜೆಯುಡಿ) ಹೆಸರನ್ನು ರಾಜಕೀಯ ಪಕ್ಷವನ್ನಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ಕೋರಿ ಎಂಎಂಎಲ್ ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನ ಚುನಾವಣಾ ಆಯೋಗ ಎರಡನೇ ಬಾರಿ ತಿರಸ್ಕರಿಸಿದ ಒಂದು ದಿನದ ನಂತರ ಈ ಬೆಳವಣಿಗೆ ಕಂಡು ಬಂದಿದೆ.
ಜೆಯುಡಿ ಹೆಸರನ್ನು ರಾಜಕೀಯ ಪಕ್ಷವಾಗಿ ಮಾನ್ಯ ಮಾಡಲು ನಿನ್ನೆ ಆಯೋಗ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಹಫೀಜ್ ನೇತೃತ್ವದ ಎಂಎಂಎಲ್, ಈಗಾಗಲೇ ಆಯೋಗದಲ್ಲಿ ನೋಂದಣಿಯಾಗಿರುವ ಪರಿಚಿತವಲ್ಲದ ಎಎಟಿ ರಾಜಕೀಯ ಪಕ್ಷವನ್ನು ವೇದಿಕೆಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದೆ.
ಪಾಕ್‍ನಲ್ಲಿ ಜುಲೈ 25ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಎಟಿ ಪಕ್ಷದ ಹೆಸರಿನಲ್ಲಿ ಎಂಎಂಎಲ್ ಬೆಂಬಲಿತ ಸುಮಾರು 200 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಪಾಕಿಸ್ತಾನ ಚುನಾವಣಾ ಆಯೋಗ ಮಾನ್ಯ ಮಾಡಿರುವ ರಾಜಕೀಯ ಪಕ್ಷಗಳ ಪಟ್ಟಿಯಲ್ಲಿ ಎಎಟಿ 10ನೇ ಸ್ಥಾನದಲ್ಲಿದೆ.