ಬೆಂಗಳೂರು, ಜೂ.14-ಉತ್ತಮ ಆಡಳಿತ ನೀಡುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದರು.
ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆಯಾಗಿ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನಮ್ಮದು ಹೆಸರಿಗೆ ಮಾತ್ರ ಮೈತ್ರಿ ಸರ್ಕಾರ. ಆದರೆ, ನಮ್ಮ ಉದ್ದೇಶ ಜನರಿಗೆ ಉತ್ತಮ ಆಡಳಿತ ನೀಡುವುದು. ಶೀಘ್ರದಲ್ಲೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ನಮ್ಮ ಸರ್ಕಾರದ ಉದ್ದೇಶವೇನು ಎಂಬುದನ್ನು ಅಧಿಕಾರಿಗಳಿಗೆ ತಿಳಿಸುತ್ತೇವೆ. ಕರ್ನಾಟಕದ ಅಧಿಕಾರಿಗಳು ಪ್ರಜ್ಞಾವಂತರು, ಉತ್ತಮ ಕೆಲಸಗಾರರು ಎಂದು ರಾಷ್ಟ್ರಮಟ್ಟದಲ್ಲಿ ಹೆಸರಿದೆ. ಅದರಂತೆ ಕೆಲಸ ಮಾಡಿ ತೋರಿಸಿ ಎಂದು ಮನವಿ ಮಾಡಿದರು.
ಪೆÇಲೀಸ್ ಠಾಣೆಯಲ್ಲಿ ಜನ ಸಾಮಾನ್ಯರಿಗೆ ನ್ಯಾಯ ಸಿಕ್ಕಾಗ, ರೈತರ ಬೇಡಿಕೆಗಳು ಈಡೇರಿದಾಗ ಮಾತ್ರ ಉತ್ತಮ ಆಡಳಿತ ನೀಡುತ್ತಿದ್ದೇವೆ ಎಂದು ಅರ್ಥವಾಗುತ್ತದೆ. ಆರ್ಥಿಕ ಕ್ಷೇತ್ರಕ್ಕೆ ಕೈಗಾರಿಕೆಗಿಂತಲೂ ಹೆಚ್ಚಿನ ಪಾಲು ನೀಡುವ ಕೃಷಿಗೆ ಹೆಚ್ಚು ಮನ್ನಣೆ ನೀಡಬೇಕು ಎಂದು ತಿಳಿಸಿದರು.
ನಾಲ್ಕೈದು ವರ್ಷಗಳಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಇತ್ತು. ಕೃಷಿ ಉತ್ಪಾದನೆ ಕುಂಠಿತವಾಗಿದೆ. ಅದರ ನಡುವೆ ರೈತರ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಬೇಕಿದೆ. ಎಲ್ಲದ್ದಕ್ಕೂ ಕೇಂದ್ರ ಸರ್ಕಾರದ ಅನುದಾವನ್ನೇ ನಂಬಿ ಕೂರಲು ಸಾಧ್ಯವಿಲ್ಲ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರಬೇಕಿದೆ. ನಾವೆಲ್ಲ ಸರ್ಕಾರಿ ಶಾಲೆಯಲ್ಲೇ ಓದಿದ್ದು, ಆದರೆ, ಈಗ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳೇ ಬರುತ್ತಿಲ್ಲ. ಬಹುತೇಕ ಸರ್ಕಾರಿ ಪದವಿ ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ಕೊರತೆ ಎದುರಾಗುತ್ತಿದೆ. ಇದಕ್ಕೆ ಕಾರಣ ತಿಳಿಯಬೇಕು. ಸರ್ಕಾರಿ ಶೈಕ್ಷಣಿಕ ವ್ಯವಸ್ಥೆಯನ್ನು ಸುಧಾರಿಸುವ ಕೆಲಸವಾಗಬೇಕು. ಖಾಸಗಿ ಆಸ್ಪತ್ರೆಗನುಗುಣವಾಗಿ ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸಬೇಕು ಎಂದು ಹೇಳಿದರು.
ಪ್ರಕೃತಿ ವಿಕೋಪದಿಂದ ಹೆಚ್ಚಿನ ಅನಾಹುತಗಳಾಗುತ್ತಿವೆ. ಅದನ್ನು ಎದುರಿಸಲು ನಮ್ಮಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಜಿಲ್ಲಾ ಮಟ್ಟದಲ್ಲೂ ಇದಕ್ಕಾಗಿ ಪ್ರತ್ಯೇಕ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದೆ.
ಬಜೆಟ್‍ನಲ್ಲಿ ನಿಗದಿಪಡಿಸಲಾದ ಅನುದಾನ ಕಾಲಕಾಲಕ್ಕೆ ಖರ್ಚಾಗದೆ ಯಾವುದೇ ಒಂದು ಹಂತದಲ್ಲಿ ಅಡೆತಡೆಯಿಂದ ಸ್ಥಗಿತಗೊಳ್ಳುತ್ತದೆ. ವರ್ಷದ ಮೂರ್ನಾಲ್ಕು ತಿಂಗಳಿನಲ್ಲಿ ಹೆಚ್ಚು ಅನುದಾನ ಖರ್ಚಾಗುತ್ತಿದೆ. ಇದು ಏಕೆ ಮತ್ತು ಬಾಟಲ್‍ನೆಕ್ ಯಾವುದು ಎಂಬುದನ್ನು ಹಿರಿಯ ಅಧಿಕಾರಿಗಳು ಪತ್ತೆಹಚ್ಚಿ ಅದನ್ನು ನಿವಾರಿಸಬೇಕೆಂದು ಪರಮೇಶ್ವರ್ ಸಲಹೆ ನೀಡಿದರು.