ಚಿಕ್ಕಮಗಳೂರು: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ಶೃಂಗೇರಿ ದೇವಸ್ಥಾನದ ಮೆಟ್ಟಿಲುಗಳ ತನಕ ನೀರು ಬಂದಿದ್ದು ಮುಳುಗಡೆ ಭೀತಿಯಲ್ಲಿದೆ. ಇದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಇನ್ನು ಕಳಸ ಸಮೀಪದ ಹಳುವಳ್ಳಿ ಎಂಬಲ್ಲಿ ರಸ್ತೆಗೆ ನೀರು ನುಗ್ಗಿದ್ದು, ಕಳಸ- ಬಾಳೆಹೊನ್ನೂರು ಸಂಪರ್ಕ ಕಡಿತವಾಗಿದೆ. ನೆಲ್ಲಿಬೀಡು, ಕುದುರೆಮುಖದಲ್ಲಿ ಸೇತುವೆಯ ಮೇಲೆ ನೀರು ಹರಿದ ಪರಿಣಾಮ ಕಳಸ-ಕುದುರೆಮುಖ-ಮಂಗಳೂರು ರಸ್ತೆ ಸಂಪರ್ಕ ಕೂಡಾ ಕಡಿತಗೊಂಡಿದೆ.
ಅಲ್ಲದೆ ಕಳಸ-ಹೊರನಾಡು,ಕಳಸ-ಕಳಕೋಡು ಸಂಪರ್ಕ ಕೂಡಾ ಕಡಿತಗೊಂಡಿದೆ. ಕುದುರೆಮುಖ ಅಯ್ಯಪ್ಪ ಸ್ವಾಮಿ ದೇವಸ್ಥಾನ ಜಲಾವೃತವಾಗಿದೆ. ಹೊರನಾಡು ಸಮೀದ ಹೆಬ್ಬಾಳೆ ಎಂಬಲ್ಲಿ ಹೋಂ ಸ್ಟೇ ಹೋಟೆಲ್, ಮೂರು ಅಂಗಡಿಗಳು ಜಲಾವೃತವಾಗಿವೆ.