ನವದೆಹಲಿ, ಜೂ.13-ಮುಷ್ಕರ ನಿಲ್ಲಿಸಲು ಐಎಎಸ್ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂಬದೂ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲೆಫ್ಟಿನೆಂಟ್ ಗೌರ್ನರ್ ಕಚೇರಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಸಂಪುಟ ಸಹೋದ್ಯೋಗಿಗಳು ಎರಡನೇ ದಿನವೂ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.
ಈ ನಡುವೆ ದೆಹಲಿ ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಇಂದಿನಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಪ್ರತಿಭಟನೆ ಮತ್ತಷ್ಟು ಚುರುಕುಗೊಂಡಿದೆ. ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನಿರಶನ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಕೇಜ್ರಿವಾಲ್, ಸಿಸೋಡಿಯಾ ಹಾಗೂ ಸಚಿವರಾದ ಗೋಪಾಲ್ ರಾಯ್ ಮತ್ತು ಸತ್ಯೇಂದ್ರ ಜೈನ್ ಸೋಮವಾರ ಸಂಜೆ 5.30ಕ್ಕೆ ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ನಂತರ ಸಾಯಂಕಾಲದಿಂದ ಬೆಳಗ್ಗವರೆಗೆ ಲೆ.ಗೌ. ಕಾರ್ಯಾಲಯದಲ್ಲೇ ಧರಣಿ ಕುಳಿತರು. ಬೆಳಗ್ಗೆಯೂ ಸಹ ಅವರು ಪ್ರತಿಭಟನೆ ಮುಂದುವರಿಸಿದರು. ಜೈನ್ ನಿನ್ನೆಯಿಂಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇಂದು ಅವರಿಗೆ ಸಿಸೋಡಿಯಾ ಸಾಥ್ ನೀಡಿ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದಾರೆ.
ಮುಷ್ಕರ ನಿರತ ಐಎಸ್ಎಸ್ ಅಧಿಕಾರಿಗಳು ಹರತಾಳ ನಿಲ್ಲಿಸಬೇಕು ಮತ್ತು ನಾಲ್ಕು ತಿಂಗಳಿನಿಂದ ಕಾರ್ಯ ಸ್ಥಗಿತಗೊಳಿಸಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಮುಖ್ಯಮಂತ್ರಿ ಮತ್ತು ಸಂಪುಟ ಸಚಿವರ ಬೇಡಿಕೆಯಾಗಿದೆ.
ದೆಹಲಿಯ ಇತಿಹಾಸದಲ್ಲೇ ಮುಖ್ಯಮಂತ್ರಿ ಹಾಗೂ ಸಚಿವರು ಲೆ.ಗೌ.ಕಚೇರಿಯಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ಮುಂದುವರಿಸಿರುವುದು ಇದೇ ಮೊದಲು.
ಎಎಪಿ ಶಾಸಕರು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಲೆ.ಗ. ಕಚೇರಿ ಬಳಿ ಜಮಾಯಿಸಿದ್ದಾರೆ. ಆ ಪ್ರದೇಶದಲ್ಲಿ ಬ್ಯಾರಿಕೇಡ್ಗಳನ್ನು ನಿರ್ಮಿಸಿ ವ್ಯಾಪಕ ಬಂದೋಬಸ್ತ್ ಮಾಡಲಿದ್ದಾರೆ.