ಕರ್ನಾಟಕ, ಕೇರಳ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆ!

ನವದೆಹಲಿ, ಜೂ.12-ಕರ್ನಾಟಕ, ಕೇರಳ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು ಮತ್ತೆ ಎಚ್ಚರಿಕೆ ನೀಡಿದೆ.
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಮುಂಗಾರು ಮಳೆ ಆರ್ಭಟಿಸಿದ್ದು, ಸಾವು-ನೋವು ಸಂಭವಿಸಿವೆ. ನದಿಗಳು ಭೋರ್ಗರೆಯುತ್ತಿವೆ. ಅಪಾರ ಬೆಳೆ ಹಾನಿಗೀಡಾಗಿದೆ. ಇವೆಲ್ಲದರ ನಡುವೆ ಐಎಂಡಿ ಮತ್ತೆ ಭಾರೀ ಮಳೆ ಬಗ್ಗೆ ಮುನ್ಸೂಚನೆ ನೀಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕ ಕರಾವಳಿ ಪ್ರದೇಶ, ಕೇರಳ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಛತ್ತೀಸ್‍ಗಢ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ರಾಜ್ಯಗಳ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಅಲ್ಲದೇ, ಉತ್ತರ ಪ್ರದೇಶ, ವಿಧರ್ಭ, ಮಧ್ಯ ಮಹಾರಾಷ್ಟ್ರ, ಜಾರ್ಖಂಡ್, ಬಿಹಾರ್ ತೆಲಂಗಾಣ, ರಾಯಲ್ ಸೀಮೆ ಹಾಗೂ ಕರ್ನಾಟಕದ ಉತ್ತರ ಒಳನಾಡಿನಲ್ಲೂ ಗುಡುಗು ಸಹಿತ ವರ್ಷಧಾರೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಗೋವಾ, ಕೇರಳ ಮತ್ತು ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಬಿರುಗಾಳಿಯಿಂದ ಕೂಡಿದ ಮಳೆಯಾಗಲಿದೆ ಎಂದು ಮನ್ನೆಚ್ಚರಿಕೆ ಲಭಿಸಿದೆ.
ಕರ್ನಾಟಕದ ಅನೇಕ ಭಾಗಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ನಿನ್ನೆ ಬಿರುಗಾಳಿ, ಗುಡುಗು-ಸಿಡಿಲುಗಳೊಂದಿಗೆ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಆಗ್ನೇಯ ಮುಂಗಾರು ಮಾರುತಗಳು ಬಿರುಸಾಗಿದ್ದು ಹಲವೆಡೆ ವ್ಯಾಪಕ ವರ್ಷಧಾರೆಯಾಗಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಒಳನಾಡು ಪ್ರದೇಶಗಳಾದ ಕೊಡಗು, ಹಾಸನ ಮತ್ತು ಚಿಕ್ಕಮಗಳೂರಿಗಳಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಈ ಭಾಗಗಳಲ್ಲಿ ನಿನ್ನೆ 13 ಸೆಂ.ಮೀ. ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಹಲವಾರು ಮರಗಳು ಉರುಳಿ ಬಿದ್ದು, ರಸ್ತೆಗಳಿಗೆ ಹಾನಿಯಾಗಿವೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಘಟ್ಟ ಪ್ರದೇಶದ ಯಡಕುಮರಿಯಲ್ಲಿ ಭೂಕುಸಿತದಿಂದ ಗುಡ್ಡ ಕುಸಿದು ಸಂಚಾರಕ್ಕೆ ಅಡಚಣೆಯಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ