ಓಲಾ ಕ್ಯಾಬ್ ಹತ್ತಿದ ಇಬ್ಬರು ದರೋಡೆಕೋರರು ಚಾಲಕನಿಗೆ ಚಾಕು ತೋರಿಸಿ ಹಣ ಹಾಗೂ ಮೊಬೈಲ್ ಕಿತ್ತು ಪರಾರಿ

ಬೆಂಗಳೂರು, ಫೆ.23- ಡ್ರಾಪ್ ಪಡೆಯುವ ನೆಪದಲ್ಲಿ ಓಲಾ ಕ್ಯಾಬ್ ಹತ್ತಿದ ಇಬ್ಬರು ದರೋಡೆಕೋರರು ಮಾರ್ಗಮಧ್ಯೆ ಚಾಲಕನಿಗೆ ಚಾಕು ತೋರಿಸಿ ಬೆದರಿಸಿ ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾತ್ರಿ 9 ಗಂಟೆ ಸಮಯದಲ್ಲಿ ಇಬ್ಬರು ವಂಚಕರು ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ನೈಸ್ ರಸ್ತೆ ಜಂಕ್ಷನ್ ಬಳಿ ವಾಹನ ಬಂದಾಗ ಕ್ಯಾಬ್ ಚಾಲಕ ಸುನಿಲ್‍ಕುಮಾರ್ ಅವರಿಗೆ ತಿಪ್ಪೇಶ್ ಎಂದು ಪರಿಚಯ ಮಾಡಿಕೊಂಡ ವಂಚಕರ ಪೈಕಿ ಒಬ್ಬಾತ ಕೋಣನಕುಂಟೆಗೆ ಡ್ರಾಪ್ ಕೇಳಿ ಹತ್ತಿದ್ದಾರೆ.

ಇವರಿಬ್ಬರನ್ನು ಹತ್ತಿಸಿಕೊಂಡ ಕ್ಯಾಬ್ ಚಾಲಕ ಸುನಿಲ್‍ಕುಮಾರ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಗೊಟ್ಟಿಗೆರೆ ಸೇತುವೆ ಬ್ರಿಡ್ಜ್ ಬಳಿ ವಂಚಕರು ಕ್ಯಾಬ್ ನಿಲ್ಲಿಸಲು ಹೇಳಿದ್ದಾರೆ. ಏಕೆ ಎಂದು ಪ್ರಶ್ನಿಸುತ್ತಿದ್ದಂತೆ ಒಬ್ಬಾತ ಚಾಕು ತೋರಿಸಿ ಬೆದರಿಸಿ ಚಾಲಕನ ಬಳಿ ಇದ್ದ ಮೊಬೈಲ್ ಹಾಗೂ 2500ರೂ. ಕಸಿದುಕೊಂಡು ಮತ್ತೆ ವಾಹನ ಚಾಲನೆ ಮಾಡುವಂತೆ ಹೇಳಿ ಕೆಂಗೇರಿವರೆಗೂ ಡ್ರಾಪ್ ಪಡೆದು ಅಲ್ಲಿ ಇಳಿದು ವಂಚಕರು ಪರಾರಿಯಾಗಿದ್ದಾರೆ.

ಈ ಸಂಬಂಧ ಸುನಿಲ್‍ಕುಮಾರ್ ಅವರು ಹುಳಿಮಾವು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಪರಿಶೀಲಿಸಿದ ಪೊಲೀಸರು ಘಟನೆಯ ವ್ಯಾಪ್ತಿ ಕೋಣನಕುಂಟೆಯಲ್ಲಿ ನಡೆದಿರುವುದರಿಂದ ಅಲ್ಲಿನ ಠಾಣೆಗೆ ವರ್ಗಾಯಿಸುವುದಾಗಿ ಹುಳಿಮಾವು ಪೆÇಲೀಸರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ