ನವದೆಹಲಿ, ಜೂ.10-ಸಾರ್ವಜನಿಕ ವಲಯದ ಬ್ಯಾಂಕುಗಳು 2017-18ನೇ ಹಣಕಾಸು ಸಾಲಿನಲ್ಲಿ 87,357 ಕೋಟಿ ರೂ.ಗಳ ಒಟ್ಟು ನಿವ್ವಳ ನಷ್ಟ ಅನುಭವಿಸಿದೆ. ಸಂಚಿತ ನಷ್ಟ ಅನುಭವಿಸಿದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 12,283 ಕೋಟಿ ರೂ.ಗಳ ನಷ್ಟದೊಂದಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ಬಿ) ಪ್ರಥಮ ಸ್ಥಾನದಲ್ಲಿದ್ದರೆ, ಐಡಿಬಿಐ ಬ್ಯಾಂಕ್ ದ್ಚಿತೀಯ(8,237 ಕೋಟಿ ರೂ.ಗಳು) ಸ್ಥಾನದಲ್ಲಿದೆ.
ಸರ್ಕಾರಿ ಸ್ವಾಮ್ಯದ 21 ಬ್ಯಾಂಕುಗಳಲ್ಲಿ, ಇಂಡಿಯನ್ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಮಾತ್ರ 2017-18ನೇ ಸಾಲಿನಲ್ಲಿ ಲಾಭ ಗಳಿಸಿದೆ. ಈ ಅವಧಿಯಲ್ಲಿ ಇಂಡಿಯನ್ ಬ್ಯಾಂಕ್ 1,258.99 ಕೋಟಿ ರೂ. ಹಾಗೂ ವಿಜಯಾ ಬ್ಯಾಂಕ್ 727.02 ಕೋಟಿ ರೂ.ಗಳ ಅಧಿಕ ಲಾಭ ಗಳಿಸಿರುವುದು ಇಲ್ಲಿ ಗಮನಾರ್ಹ.
ಉಳಿದ ಸರ್ಕಾರಿ ಒಡೆತನದ ಬ್ಯಾಂಕುಗಳು ಕಳೆದ ವಿತ್ತ ವರ್ಷದಲ್ಲಿ ಒಟ್ಟು 87,357 ಕೋಟಿ ರೂ.ಗಳ ನಿವ್ವಳ ನಷ್ಟ ಅನುಭವಿಸಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಈ ಎಲ್ಲ ಬ್ಯಾಂಕುಗಳು 2016-17ನೇ ಸಾಲಿನಲ್ಲಿ ಒಟ್ಟಿಗೆ 473.72 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದ್ದವು. ವಜ್ರ ವ್ಯಾಪಾರಿ ನೀರವ್ ಮೋದಿ ಮತ್ತು ಆತನ ಸಂಸ್ಥೆಗಳಿಂದ 14,000 ಕೋಟಿ ರೂ.ಗಳ ವಂಚನೆಗೆ ಗುರಿಯಾಗಿರುವ ಪಿಎನ್ಬಿ, ಕಳೆದ ಹಣಕಾಸು ವರ್ಷದಲ್ಲಿ 12,282.82 ಕೋಟಿ ರೂ. ನಿವ್ವಳ ನಷ್ಟಕ್ಕೆ ತುತ್ತಾಗಿದೆ. ಅದಕ್ಕೂ ಹಿಂದಿನ ವರ್ಷ ಪಂಜಾಬ್ ನ್ಯಾಷನಲ್ ಬ್ಯಾಂಕ್ 1,324.8 ಕೋಟಿ ರೂ.ಗಳ ಲಾಭ ಗಳಿಸಿತ್ತು.