ಮುಂಬೈ ದಾಳಿ ಪ್ರಮುಖ ರೂವಾರಿ ಹಫೀಜ್ ಸಯೀದ್, ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನ

ಲಾಹೋರ್, ಜೂ.9- ಮುಂಬೈ ದಾಳಿ ಪ್ರಮುಖ ರೂವಾರಿ ಹಫೀಜ್ ಸಯೀದ್ ಮುಂದಿನ ತಿಂಗಳು ನಡೆಯಲಿರುವ ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾನೆ. ಆದರೆ, ಪಾಕಿಸ್ತಾನದ 200ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ನೇತೃತ್ವದ ಜಮಾತ್ ಉದ್ ದವಾ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾನೆ. ಕಳೆದ 2008ರಲ್ಲಿ ಮುಂಬೈ ಮೇಲೆ ನಡೆದ ದಾಳಿಯ ನೇತೃತ್ವ ವಹಿಸಿದ್ದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಪ್ರತಿರೂಪವೇ ಜಮಾತ್ ಉದ್ ದವಾ ಆಗಿದ್ದು, ತನ್ನ ಸಂಘಟನೆಯನ್ನು ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್)ನ್ನಾಗಿ ಪರಿವರ್ತಿಸಿ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಯೀದ್ ತೀರ್ಮಾನಿಸಿದ್ದಾನೆ ಎಂದು ತಿಳಿದುಬಂದಿದೆ.
ಎಂಎಂಎಲ್ ಪಕ್ಷವನ್ನು ಸಯೀದ್ ಇನ್ನೂ ಪಾಕ್ ಚುನಾವಣಾ ಆಯೋಗಕ್ಕೆ ನೋಂದಾಯಿಸಿಲ್ಲ. ಆದರೂ ರಾಜಕೀಯಕ್ಕೆ ಬರಲು ತೀರ್ಮಾನಿಸಿರುವ ಆತ ಮುಂದಿನ ತಿಂಗಳ 25ರಂದು ನಡೆಯಲಿರುವ ಚುನಾವಣೆಯಲ್ಲಿ ಅಲ್ಲಾಹು ಅಕ್ಬರ್ ತೆಹರಿಕ್ ಪಕ್ಷದ ಜತೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾನೆ.
ಈಗಾಗಲೇ ಕೆಲವು ಜಮಾತ್ ಉದ್ ದವಾದ ಪದಾಧಿಕಾರಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ. ಎಂಎಂಎಲ್ ಅಧ್ಯಕ್ಷ ಸೈಫುಲ್ಲಾ ಖಾಲಿದ್ ಹಾಗೂ ಅಲ್ಲಾಹು ಅಕ್ಬರ್ ತೆಹರಿಕ್ ಪಕ್ಷಗಳು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜಂಟಿಯಾಗಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಮ್ಮತಿ ವ್ಯಕ್ತಪಡಿಸಿವೆ. ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ದುಷ್ಕøತ್ಯಗಳನ್ನೆಸಗಿ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಎಂದು ಜಮಾತ್ ಉದ್ ದವಾ ಗುರುತಿಸಿಕೊಂಡಿದೆ.
2014ರಲ್ಲಿ ಅಮೆರಿಕ ಜಮಾತ್ ಉದ್ ದವಾ ಸಂಘಟನೆಯನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಎಂದು ಒಪ್ಪಿಕೊಂಡಿದ್ದು, ಅದರ ಮುಖ್ಯಸ್ಥನ ತಲೆಗೆ 10 ಮಿಲಿಯನ್ ಅಮೆರಿಕನ್ ಡಾಲರ್ ಘೋಷಣೆ ಮಾಡಿದ್ದನ್ನು ಉಲ್ಲೇಖಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ