ನಮ್ಮ ದೇಹದಲ್ಲಿನ ಜೀವಕೋಶಗಳು ನಿಯಂತ್ರಣ ತಪ್ಪಿ ಅನಿಯಂತ್ರಿತವಾಗಿ ಬೆಳೆಯುವುದನ್ನು ಅರ್ಬುದ ರೋಗ ಅಥವಾ ಕ್ಯಾನ್ಸರ್ ಎಂದು ಹೇಳುತ್ತಾರೆ. ದೇಹದಲ್ಲಿ ಹಲವಾರು ರೀತಿಯ ಕ್ಯಾನ್ಸರ್ ಬರಬಹುದು. ಅದು ಶ್ವಾಸಕೋಶದ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್, ರಕ್ತದ ಕ್ಯಾನ್ಸರ್ ಹೀಗೆ ಹತ್ತು ಹಲವು ಅಂಗಗಳು ಮತ್ತು ಅಂಗಾಂಶಗಳಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ದೇಹಕ್ಕೆ ಬರುವ ಕ್ಯಾನ್ಸರ್‍ಗಳಲ್ಲಿ ಬಾಯಿ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಯುವ ಜನರು ಹೆಚ್ಚು ಹೆಚ್ಚು ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಹೆಚ್ಚು ಬಳಸುತ್ತಿರುವುದೇ ಇದಕ್ಕೆ ಮೂಲ ಕಾರಣ ಎಂದರೂ ತಪ್ಪಿಲ್ಲ. ಮೊದಲು 6ನೇ ಸ್ಥಾನದಲ್ಲಿದ್ದ ಬಾಯಿ ಕ್ಯಾನ್ಸರ್ ಈಗ ಎರಡನೇ ಸ್ಥಾನಕ್ಕೆ ಜಿಗಿದಿದೆ. ಅದೇ ರೀತಿ ಮೊದಲೆಲ್ಲಾ 50-60 ವಯಸ್ಸಿನಲ್ಲಿ ಬರುತ್ತಿದ್ದ ಬಾಯಿ ಕ್ಯಾನ್ಸರ್ ಈಗೀಗ 30-40ರ ಹರೆಯದಲ್ಲಿ ಬರುತ್ತಿರುವುದು ಆತಂಕಕಾರಿ ವಿಚಾರ.
ಬಾಯಿ ಕ್ಯಾನ್ಸರಿಗೆ ಕಾರಣಗಳು ಏನು?
ಬಾಯಿ ಕ್ಯಾನ್ಸರಿಗೆ ಯಾವುದೇ ಒಂದು ನಿರ್ಧಿಷ್ಠ ಕಾರಣಗಳು ಇಲ್ಲದಿದ್ದರೂ, ಹಲವಾರು ತೊಂದರೆಗಳಿಂದಾಗಿ ಅಥವಾ ಕಾರಣಗಳು ಒಟ್ಟು ಸೇರಿ, ಬಾಯಿಯೊಳಗಿನ ಜೀವಕೋಶದಲ್ಲಿನ ನ್ಯೂಕ್ಲಿಯಸ್‍ನಲ್ಲಿರುವ ಡಿ.ಎನ್.ಎಯಲ್ಲಿ ಮ್ಯುಟೇಶನ್ ಉಂಟಾಗಿ ಜೀವಕೋಶಗಳ ನಿಯಂತ್ರಿತ ವಿಭಜನೆ ದಾರಿ ತಪ್ಪಿ ಅನಿಯಂತ್ರಿತ ವಿಭಜನೆಯಿಂದಾಗಿ ಬಾಯಿಯೊಳಗೆ ಗೆಡ್ಡೆ ಬೆಳೆಯಲು ಆರಂಭವಾಗುತ್ತದೆ.
ಹೆಚ್ಚಿನ ಬಾಯಿ ಕ್ಯಾನ್ಸರಿಗೆ ತಂಬಾಕು ಮತ್ತು ತಂಬಾಕು ಉತ್ಪನ್ನಗಳು, ಮದ್ಯಪಾನ ಮತ್ತು ಧೂಮಪಾನ ಪರೋಕ್ಷವಾಗಿ ಕಾರಣವಾಗುತ್ತದೆ ಎಂದು ಅಂಕಿಅಂಶಗಳಿಂದ ಮತ್ತು ಸಂಶೋಧನೆಗಳಿಂದ ತಿಳಿದುಬಂದಿದೆ. ಸುಮಾರು 75 ಶೇಕಡ ಬಾಯಿಕ್ಯಾನ್ಸರ್ ತಂಬಾಕುನಿಂದಲೇ ಬರುತ್ತದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಅತಿಯಾದ ವಿಕಿರಣಗಳಿಗೆ ತೆರೆದುಕೊಳ್ಳುವುದು, ಆಹಾರದಲ್ಲಿನ ಲೋಪ ಬಾಯಿಯ ಶುಭ್ರತೆ ಕಾಪಾಡದಿರುವುದು, ವೈರಾಣುವಿನ ಸೋಂಕು, ಸರಿಯಾದ ಮಾಪನ ತೆಗೆಯದೇ ಮಾಡಿದ ಕೃತಕ ಹಲ್ಲಿನ ಸೆಟ್ಟುಗಳು, ಮತ್ತು ಚೂಪಾದ ಹಲ್ಲಿನ ಅಥವಾ ಹಲ್ಲು ತುಂಬಿಸಲಾದ ಕೃತಕ ಸಿಮೆಂಟ್‍ಗಳು ಪರೋಕ್ಷವಾಗಿ ಬಾಯಿ ಕ್ಯಾನ್ಸರ್‍ಗೆ ಕಾರಣವಾಗುತ್ತದೆ. ಎಂದು ತಿಳಿದು ಬಂದಿದೆ. ಇದರ ಜೊತೆಗೆ ಅನುವಂಶಿಯ ಕಾರಣಗಳಿಂದಲೂ ಕ್ಯಾನ್ಸರ್ ಬರುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಹತ್ತು ಹಲವು ಕಾರಣಗಳು ಒಟ್ಟುಗೂಡಿ ಬಾಯಿ ಕ್ಯಾನ್ಸರ್‍ನಲ್ಲಿ ದುರಂತ ಅಂತ್ಯ ಕಾಣುತ್ತದೆ. ಆರಂಭಿಕ ಹಂತದಲ್ಲಿ ಗುರುತಿಸಿ ಸರಿಯಾದ ಚಿಕಿತ್ಸೆ ನೀಡಿದಲ್ಲಿ ಬಾಯಿ ಕ್ಯಾನ್ಸರನ್ನು ಸಂಪೂರ್ಣ ಗುಣಪಡಿಸಬಹುದು. ಕ್ಯಾನ್ಸರ್ ಗುಣಪಡಿಸಲಾಗದ ಕಾಯಿಲೆ ಎಂಬುದು ತಪ್ಪು ಕಲ್ಪನೆ. ಅಂತಿಮ ಹಂತದಲ್ಲಿ ಕ್ಯಾನ್ಸರ್ ದೇಹದೆಲ್ಲೆಡೆ ಹರಡಿದ ಬಳಿಕ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದು. ಬಾಯಿಯ ಕ್ಯಾನ್ಸರ್‍ನ ವಿಶೇಷತೆ ಎಂದರೆ ಬಾಯಿಯೊಳಗಿನ ಎಲ್ಲಾ ವ್ಯತ್ಯಾಸಗಳು ನೇರವಾಗಿ ಕಣ್ಣಿಗೆ ಕಾಣಿಸುತ್ತದೆ. ಉಳಿದ ಕ್ಯಾನ್ಸರ್‍ಗಳಲ್ಲಿ ಬರಿಗಣ್ಣಿಗೆ ಈ ರೀತಿಯ ವ್ಯತ್ಯಾಸ ಕಣ್ಣಿಗೆ ಕಾಣಿಸದು. ಈ ಕಾರಣದಿದಂಲೇ ಆರಂಭಿಕ ಹಂತದಲ್ಲಿಯೇ ಬಾಯಿ ಕ್ಯಾನ್ಸರನ್ನು ಗುರುತಿಸಿ ಚಿಕಿತ್ಸೆ ನೀಡುವುದಲ್ಲಿಯೇ ಜಾಣತನ ಅಡಗಿದೆ.
ಲಕ್ಷಣಗಳು ಏನು?
- ಆರಂಭಿಕ ಹಂತದಲ್ಲಿ ಬಾಯಿಯಲ್ಲಿ ಬಿಳಿ ಅಥವಾ ಕೆಂಪು ಕಲೆಗಳು ಕಾಣಿಸಿಕೊಳ್ಳಬಹುದು.
- ಖಾರ, ಹುಳಿ ಮತ್ತು ಬಿಸಿ ಪದಾರ್ಥಗಳನ್ನು ಸೇವಿಸಿದಾಗ ಬಾಯಿಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ.
- ಬಾಯಿ ತೆರೆಯಲು ಕಷ್ಟವಾಗುತ್ತದೆ. ಸಾಮಾನ್ಯವಾಗಿ ಅರೋಗ್ಯವಂತ ವ್ಯಕ್ತಿ 50 ಮಿ.ಮಿ ನಷ್ಟು ಬಾಯಿ ತೆರೆಯಬಹುದು ಆದರೆ ಕ್ಯಾನ್ಸರ್ ಬಂದಾಗ ಬಾಯಿ ತೆರೆಯಲು ಕಷ್ಟವಾಗಬಹುದು. ಕೆಲವೊಮ್ಮೆ ಕೊನೆಹಂತದಲ್ಲಿ ಬಾಯಿ ಸಂಪೂರ್ಣವಾಗಿ ಮುಚ್ಚಿಕೊಳ್ಳಬಹುದು. ಬಾಯಿ ತೆರೆಯಲು ಕಷ್ಟವಾಗದಾಗ ದಂತವೈದ್ಯರ ಬಳಿ ತೋರಿಸಕೊಳ್ಳತಕ್ಕದ್ದು.
- ನಾಲ್ಕನೆ ಹಂತದಲ್ಲಿ ಬಾಯಿಯೊಳಗೆ ಹುಣ್ಣು ಹುಟ್ಟಿಕೊಂಡು ಯಾವುದೇ ಔಷಧಿಗಳಿಗೆ ಸ್ಪಂದಿಸುವುದಿಲ್ಲ ಮತ್ತು ಒಂದು ವಾರಕ್ಕಿಂತಲೂ ಜಾಸ್ತಿ ಬಾಯಿಯಲ್ಲಿ ಹುಣ್ಣು ಒಣಗದಿದ್ದಲ್ಲಿ, ತಕ್ಷಣವೇ ದಂತ ವೈದ್ಯರನ್ನು ಸಂದರ್ಶಿಸತಕ್ಕದ್ದು.
- ಬಾಯಿಯೊಳಗೆ ಸಣ್ಣ ಸಣ್ಣ ಗೆಡ್ಡೆಗಳು ಬೆಳೆಯತ್ತದೆ. ಮತ್ತು ಗೆಡ್ಡೆಗಳನ್ನು ಮುಟ್ಟಿದಾಗ ರಕ್ತ ಒಸರುತ್ತದೆ.
- ಮಾತನಾಡಲು, ಆಹಾರ ಜಗಿಯಲು ಮತ್ತು ನುಂಗಲು ಕಷ್ಟವಾಗುತ್ತದೆ. ಬಾಯಿಯಲ್ಲಿ ಎಂಜಲು ಜಾಸ್ತಿ ಬಂದಂತೆ ಆನಿಸುತ್ತದೆ.
ಪತ್ತೆ ಹಚ್ಚುವುದು ಹೇಗೆ?
ಬಾಯಿಯಲ್ಲಿನ ಬೆಳೆದ ಗಡ್ಡೆಯ ಅಥವಾ ಮಾಂಸದ ತುಂಡನ್ನು ಕತ್ತರಿಸಿ ತೆಗೆದು ಸೂಕ್ಮದರ್ಶನದ ಕೆಳಗೆ ಪರೀಕ್ಷೆ ಮಾಡಲಾಗುತ್ತದೆ. ಜೀವಕೋಶದಲ್ಲಿ ಉಂಟಾದ ಬದಲಾವಣೆಗಳನ್ನು ಕಂಡುಹಿಡಿದು ಕ್ಯಾನ್ಸರನ್ನು ಪತ್ತೆ ಹಚ್ಚಲಾಗುತ್ತದೆ. ಇದರ ಜೊತೆಗೆ ಕ್ಷಕಿರಣ ಮತ್ತು ಸಿ.ಟಿ ಸ್ಕಾನ್ ಮಾಡಿ ಎಲುಬಿನ ಮತ್ತು ದೇಹದ ಇತರ ಅಂಗಗಳಿಗೆ ಹರಡಿದೆಯೋ ಎಂದು ಪತ್ತೆ ಹಚ್ಚಲಾಗುತ್ತದೆ.
ಚಿಕಿತ್ಸೆ ಹೇಗೆ?
ಬಾಯಿ ಕ್ಯಾನ್ಸರ್ ರೋಗವನ್ನು ಸರ್ಜರಿ, ವಿಕಿರಣ ಚಿಕಿತ್ಸೆ ಮತ್ತು ಕಿಮೋಥೆರಪಿ ಚಿಕಿತ್ಸೆಯನ್ನು ನೀಡಿ ಗುಣಪಡಿಸಲಾಗುತ್ತದೆ. ಆರಂಭಿಕ ಹಂತದಲ್ಲಿ ಗುರುತಿಸಿದಲ್ಲಿ ಸರ್ಜರಿಯ ಮುಖಾಂತರ ಮಾಂಸದ ಗೆಡ್ಡೆಯನ್ನು ತೆಗೆದು ಹಾಕಿ, ಅ ಬಳಿಕ ವಿಕಿರಣ ಚಿಕಿತ್ಸೆ ಮಾಡಲಾಗುತ್ತದೆ. ಅರಂಬಿಕ ಹಂತದಲ್ಲಿ (ಸ್ಟೇಜ್1 ಮತ್ತು ಸ್ಟೇಜ್2) ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ ನಿರಂತರವಾಗಿ ವೈದ್ಯರ ಭೇಟಿ ಮತ್ತು ಸಲಹೆ ಅತೀ ಅಗತ್ಯ ಪ್ರತಿ 6 ತಿಂಗಳಿಗೊಮ್ಮೆ ವೈದ್ಯರಿಗೆ ತೋರಿಸಿ ರೋಗ ಮರುಕಳಿಸಿದೆಯೇ ಎಂದು ಪರೀಕ್ಷೆ ಮಾಡಿಸಿ ಖಚಿತ ಪಡಿಸಬೇಕು. ಮುಂದುವರಿದ ಹಂತದಲ್ಲಿ ಬಾಯಿ ಕ್ಯಾನ್ಸರ್ ಬರೀ ಸರ್ಜರಿ ಮತ್ತು ವಿಕಿರಣ ಚಿಕಿತ್ಸೆಗೆ ಸ್ಪದಿಸುವುದಿಲ್ಲ. ಮಾಂಸದ ಗೆಡ್ಡೆ ಬೆಳೆದಂತೆಲ್ಲಾ, ಕ್ಯಾನ್ಸರ್ ಇರುವ ಜೀವ ಕೋಶಗಳು ರಕ್ತದ ಮುಖಾಂತರ ಮತ್ತು ಜೀವಕೋಶದ ದ್ರವ್ಯದ ಮುಖಾಂತರ ಕುತ್ತಿಗೆಗೆ ಮತ್ತು ದೇಹದ ಇತರ ಅಂಗಗಳಿಗೆ ಹರಡುತ್ತದೆ ಈ ಹಂತದಲ್ಲಿ ಸರ್ಜರಿ ಮತ್ತು ವಿಕಿರಣ ಚಿಕಿತ್ಸೆ ಜೊತೆಗೆ ಕಿಮೋಥೆರಪಿ ಚಿಕಿತ್ಸೆ ಕೂಡ ನೀಡಬೇಕಾಗುತ್ತದೆ. ದೇಹದ ಇತರ ಭಾಗಕ್ಕೆ ಕ್ಯಾನ್ಸರ್ ಹರಡಿದ ಬಳಿಕ ರೋಗವನ್ನು ಪೂರ್ಣವಾಗಿ ಗುಣಪಡಿಸಲಾಗುದಿಲ್ಲ ಮತ್ತು ರೋಗ ಮತ್ತಷ್ಟು ಹರಡದಂತೆ ಮತ್ತು ಬೆಳೆಯದಂತೆ ನಿಯಂತ್ರಿಸಲು ಹೆಚ್ಚು ಗಮನ ನೀಡಲಾಗುತ್ತದೆ. ಒಟ್ಟಿನಲ್ಲಿ ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಬಾಯಿ ಕ್ಯಾನ್ಸರನ್ನು ಸಂರ್ಪೂಣವಾಗಿ ಗುಣಪಡಿಸಬಹುದು.