ನಾಗ್ಪುರ,ಜೂ.8-ಮಾಧ್ಯಮಗಳ ವರದಿಯಲ್ಲಿ ದಲಿತ ಎಂಬ ಪದ ಬಳಸದಂತೆ ಸೂಚನೆ ನೀಡಬೇಕೆಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠ ಆದೇಶಿಸಿದೆ. ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲಿ ದಲಿತ ಎಂಬ ಪದದ ಬದಲಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಎಂದು ಉಲ್ಲೇಖಿಸುವ ಬಗ್ಗೆ ಕೇಂದ್ರ ಸಮಾಜ ಕಲ್ಯಾಣ ಇಲಾಖೆ ಮಾರ್ಚ್ 15ರಂದು ಹೊರಡಿಸಿರುವ ಸುತ್ತೋಲೆಯನ್ನು ಜಾರಿಗೊಳಿಸುವಂತೆ ನ್ಯಾಯಮೂರ್ತಿಗಳಾದ ಭೂಷಣ್ ಧರ್ಮಾಧಿಕಾರಿ ಹಾಗೂ ಜಕ ಹಕ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ. ಕೇಂದ್ರ ಸರ್ಕಾರದ ಸುತ್ತೋಲೆಯ ಆಧಾರದ ಮೇರೆಗೆ ರಾಜ್ಯ ಸರ್ಕಾರ ನಾಲ್ಕು ವಾರಗೊಳಗಾಗಿ ಅಧಿಸೂಚನೆ ಹೊರಡಿಸಲಿದೆ ಎಂದು ಸರ್ಕಾರಿ ಅಭಿಯೋಜಕರು ಕೋರ್ಟ್‍ಗೆ ತಿಳಿಸಿದ್ದಾರೆ.