ಬೆಂಗಳೂರು, ಫೆ.23- ಕಳೆದ ಐದು ವರ್ಷಗಳ ಕಾಲ ಸುಭದ್ರ ಜನಪರವಾದ ಸರ್ಕಾರ ನೀಡಿರುವ ಹೆಮ್ಮೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದರು.
2018-19ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಸಿಎಂ, ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ನಂತರ ಸಂಪೂರ್ಣ ಐದು ವರ್ಷವನ್ನು ಜನರ ಆಶೀರ್ವಾದದಿಂದ ಪೂರೈಸುತ್ತಿರುವುದು ಕೂಡ ನಾನೇ. ಆದರೆ, ಹಿಂದಿನ ಸರ್ಕಾರದಲ್ಲಿ ಐದು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದರು ಎಂದರು.
ಮುಖ್ಯಮಂತ್ರಿಯಾಗಿ 6ನೆಯ ಹಾಗೂ ಹಣಕಾಸು ಸಚಿವನಾಗಿ 13ನೇ ಬಜೆಟ್ ಮಂಡಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ನಂತರ ನಾನೇ 13 ಬಜೆಟ್ ಮಂಡಿಸಿರುವುದು. ಇದಕ್ಕೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಧನ್ಯವಾದ ಹೇಳಿದ್ದು, ನಾನೂ ಕೂಡ ಅವರಿಗೆ ಪ್ರತಿ ಧನ್ಯವಾದ ಹೇಳುತ್ತೇನೆ ಎಂದರು.
ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಮುಖ್ಯಮಂತ್ರಿ ಅವರ ಮಾತುಗಳನ್ನು ಸ್ವಾಗತಿಸಿದರು.
ಬಜೆಟ್ ಕುರಿತು ವಿರೋಧ ಪಕ್ಷದ ನಾಯಕರು ಸೇರಿದಂತೆ 10 ಮಂದಿ ಚರ್ಚೆ ಮಾಡಿದ್ದು, ಕೆಲವರು ಟೀಕಿಸಿದ್ದಾರೆ. ಕೆಲವರು ಸಲಹೆ ಸೂಚನೆ ನೀಡಿದ್ದಾರೆ. ಎಲ್ಲವನ್ನೂ ಕೂಡ ಸ್ವಾಗತಿಸುವುದಾಗಿ ಹೇಳಿದ ಸಿದ್ದರಾಮಯ್ಯ, ಇದು 14ನೇ ವಿಧಾನಸಭೆಯ ಕೊನೆಯ ಅಧಿವೇಶನವಾಗಿದ್ದು, ನಾವು ಮತ್ತೆ ಹೊಸ ವಿಧಾನಸಭೆಯಲ್ಲಿ ಮುಖಾಮುಖಿಯಾಗಬೇಕಾಗುತ್ತದೆ. ಐದು ವರ್ಷಗಳ ಆಡಳಿತಾವಧಿಯಲ್ಲಿ ಸಾಕಷ್ಟು ಟೀಕೆ, ಸಲಹೆಗಳನ್ನು ನೀಡಿದ್ದಾರೆ. ಐದು ವರ್ಷ ಸರ್ಕಾರ ಆಡಳಿತ ನಡೆಸಲು ಸಹಕಾರ ನೀಡಿದ ಆಡಳಿತ ಮತ್ತು ವಿರೋಧ ಪಕ್ಷದವರೂ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
14ನೇ ವಿಧಾನಸಭೆಗೆ ಆಯ್ಕೆಯಾಗಿದ್ದ ಎಲ್ಲಾ ಪಕ್ಷಗಳ ಎಲ್ಲಾ ಶಾಸಕರು ತಮ್ಮ ತಮ್ಮ ಪಕ್ಷಗಳಲ್ಲಿ ಟಿಕೆಟ್ ಪಡೆದು 15ನೇ ವಿಧಾನಸಭೆಗೆ ಆಯ್ಕೆಯಾಗಿ ಬರಲಿ ಎಂದು ಆಶಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಈಗಾಗಲೇ ಜನರು ತೀರ್ಮಾನ ಮಾಡಿದಂತೆ ಮತ್ತೆ ನಾವು ಆಡಳಿತಕ್ಕೆ ಬರುತ್ತೇವೆ. ಬಿಜೆಪಿಯವರು ವಿರೋಧ ಪಕ್ಷದಲ್ಲಿ ಇರುತ್ತಾರೆ ಎಂದು ಹೇಳಿದರು.
ಆಗ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು, ಈ ಹಿಂದೆ ಸಾಕಷ್ಟು ಮುಖ್ಯಮಂತ್ರಿಗಳು ಈ ರೀತಿ ಹೇಳಿ ಮನೆಗೆ ಹೋಗಿದ್ದಾರೆ. ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಆರ್.ವಿ.ದೇಶಪಾಂಡೆ ಈಗಾಗಲೇ ಗೋಡೆ ಮೇಲೆ ಈ ಬಾರಿ ಬಿಜೆಪಿ ಎಂದು ಬರೆದಿದ್ದಾರೆ ಎಂದು ಛೇಡಿಸಿದರು. ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ ಮಾತನಾಡಿ, ಸಾಲ ಮನ್ನಾಕ್ಕಾಗಿ ಜೆಡಿಎಸ್ ಬರುತ್ತದೆ ಎಂದು ಹೇಳಿದರು.