ವಯಸ್ಕರಲ್ಲಿರುವ ಜೀವಕೋಶ ಮಾರಣಾಂತಿಕ ರೋಗಗಳಿಗೆ ರಾಮಬಾಣವಾಗಲಿದೆಯೇ..?

ನೋಯ್ಡಾ, ಜೂ.8- ವಯಸ್ಕರಲ್ಲಿರುವ ಜೀವಕೋಶ ಬಳಕೆ ಮಾಡಿಕೊಂಡು ತಯಾರಿಸಲಾಗುವ ಪುನರುತ್ಪಾದಕ ಔಷಧಿ ಚಿಕಿತ್ಸಾ ಪದ್ಧತಿ ಮನುಷ್ಯರ ಮಾರಣಾಂತಿಕ ರೋಗಗಳಿಗೆ ರಾಮಬಾಣವಾಗಲಿದೆಯೇ..?
ನೋಯ್ಡಾ ಮೂಲದ ಅಡ್ವಾನ್ಸೆಲ್ಸ್ ಎಂಬ ಖಾಸಗಿ ಸಂಸ್ಥೆಯೊಂದು ಇಂತಹ ಪುನರುತ್ಪಾದಕ ಔಷಧಿಯನ್ನು ತಯಾರಿಸಿದ್ದು, ಶೀಘ್ರದಲ್ಲೇ ಮನುಷ್ಯರ ಮೇಲೆ ಪ್ರಯೋಗ ಮಾಡಲು ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಭಾರತದಲ್ಲಿ ಜೀವಕೋಶ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಅಡ್ವಾನ್ಸೆಲ್ಸ್ ಸಂಸ್ಥೆ ವಯಸ್ಕರಲ್ಲಿರುವ ಜೀವಕೋಶಗಳಿಂದ ಪುನರುತ್ಪಾದಕ ಚಿಕಿತ್ಸಾ ಪದ್ಧತಿ ಮೂಲಕ ಮನುಷ್ಯರನ್ನು ಕಾಡುವ ನರರೋಗ, ಕಿಡ್ನಿ ವೈಫಲ್ಯ, ಶ್ವಾಸಕೋಶ ಕಾಯಿಲೆ, ಹೃದಯ ಕಾಯಿಲೆ ಮತ್ತಿತರ ಮಾರಣಾಂತಿಕ ರೋಗಗಳನ್ನು ಗುಣಪಡಿಸುವ ಹೊಸ ವೈದ್ಯಕೀಯ ಮಾರ್ಗವೊಂದಕ್ಕೆ ಮುನ್ನುಡಿ ಬರೆದಿದೆ ಎಂದು ವರದಿಯಾಗಿದೆ.
ನೋಯ್ಡಾ, ಆಸ್ಟ್ರೇಲಿಯಾ ಮತ್ತು ಬಾಂಗ್ಲಾ ದೇಶಗಳಲ್ಲಿ ಅಡ್ವಾನ್ಸೆಲ್ಸ್ ಸಂಸ್ಥೆಯ ತಜ್ಞ ವೈದ್ಯರುಗಳು ನಿರಂತರ ಸಂಶೋಧನೆಯಲ್ಲಿ ತೊಡಗಿದ್ದು, ಮಾರಣಾಂತಿಕ ರೋಗಗಳಿಗೆ ಜೀವಕೋಶಗಳ ಪುನರುತ್ಪಾದಕ ಔಷಧಿಗಳ ಮೂಲಕ ಚಿಕಿತ್ಸೆ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಉದ್ಯಮಿ ವಿಫುಲ್‍ಜೈನ್ ನೇತೃತ್ವದ ತಜ್ಞ ವೈದ್ಯರ ತಂಡ ಈ ಹೊಸ ವೈದ್ಯಕೀಯ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದು, ಶೀಘ್ರದಲ್ಲೇ ಮನುಷ್ಯರನ್ನು ಕಾಡುವ ಮಾರಣಾಂತಿಕ ರೋಗಗಳಿಗೆ ರಾಮಬಾಣವಾಗಲಿದೆ ಎನ್ನಲಾದ ಔಷಧಿಯನ್ನು ಫಾರ್ಮಾ ಸಂಸ್ಥೆಗಳಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಅಡ್ವಾನ್ಸೆಲ್ಸ್ ಸಂಸ್ಥೆ ಕಂಡುಹಿಡಿದಿರುವ ಈ ಹೊಸ ಔಷಧೋಪಚಾರವನ್ನು ಮಾನವನ ಮೇಲೆ ಯಶಸ್ವಿ ಪ್ರಯೋಗ ನಡೆಸಿ ವಿಶ್ವದ ಫಾರ್ಮಾ ಮಾರುಕಟ್ಟೆಯ ನೇತೃತ್ವ ವಹಿಸಲು ಸನ್ನದ್ಧವಾಗಿದೆ ಎಂಬ ಮಾಹಿತಿಗಳು ಹೊರಬರುತ್ತಿವೆ.
ಮಾನವ ಜೀವಕೋಶಗಳನ್ನು ಬಳಕೆ ಮಾಡಿಕೊಂಡು ತಯಾರಿಸಲಾಗಿರುವ ಔಷಧಿಯನ್ನು ಈಗಾಗಲೇ ಪ್ರಾಣಿಗಳ ಮೇಲೆ ಯಶಸ್ವಿ ಪ್ರಯೋಗ ನಡೆಸಿರುವುದರಿಂದ ಕೆಲ ಆಸ್ಪತ್ರೆಗಳು ಈ ಔಷಧಿಯನ್ನು ಕೊಂಡುಕೊಳ್ಳಲು ಮನಸ್ಸು ಮಾಡಿವೆ ಎನ್ನಲಾಗಿದೆ.
ನಾವು ಸಂಶೋಧನೆ ಮಾಡಿರುವ ಜೀವಕೋಶಗಳ ಪುನರುತ್ಪಾದಕ ಚಿಕಿತ್ಸಾ ಪದ್ಧತಿ ಯಶಸ್ವಿಯಾಗಲಿದ್ದು, ನಮ್ಮ ಈ ವಿಧಾನ ಭಾರತ ಮಾತ್ರವಲ್ಲದೆ, ಇಡೀ ಜಗತ್ತಿನಲ್ಲೇ ಪ್ರಖ್ಯಾತಿ ಹೊಂದಲಿದೆ ಎಂದು ಅಡ್ವಾನ್ಸೆಲ್ಸ್ ಸಂಸ್ಥೆ ಮುಖ್ಯಸ್ಥ ವಿಫುಲ್‍ಜೈನ್ ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ