ಬೆಂಗಳೂರು:
ಸುಮುಖ ಪಿಕ್ಚಸರ್ ಲಾಂಛನದಲ್ಲಿ ಕೆ.ಶ್ರೀನಿವಾಸಮೂರ್ತಿ ಅವರು ನಿರ್ಮಿಸುತ್ತಿರುವ ಕೃಷ್ಣ ಗಾರ್ಮೆಂಟ್ಸ್ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಬೆಂಗಳೂರು ಹೊರವಲಯದ ಕನಕಪುರ ಸುಂದರ ತಾಣ ಹಾಗೂ ಕಂಠೀರವ ಸ್ಟುಡಿಯೋದಲ್ಲಿ ಭರದಿಂದ ಸಾಗುತ್ತಿದೆ. ಭಾಸ್ಕರ್ ನೀನಾಸಂ, ರಶ್ಮಿತ, ರಾಜೇಶ್ ನಟರಂಗ, ಚಂದು(ಲಕ್ಷ್ಮೀಬಾರಮ್ಮ) ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
ಪ್ರೀತಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿದ್ದಾರೆ. 2015-16ನೆ ಸಾಲಿನ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿದ್ದ ಹೆಮ್ಮರ ಚಿತ್ರವನ್ನು ಸಿದ್ದು ಅವರೆ ನಿರ್ದೇಶಿಸಿದ್ದಾರೆ.
ಶ್ರೀಮಾನ್ ಶ್ರೀಮತಿ ಧಾರಾವಾಹಿ ಖ್ಯಾತಿಯ ಭಾಸ್ಕರ್ ನೀನಾಸಂ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ಬ್ರಹ್ಮಾಸ್ತ್ರ ಧಾರಾವಾಹಿಯ ರಶ್ಮಿತ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಂದು(ಲಕ್ಷ್ಮೀ ಬಾರಮ್ಮ), ರಾಜೇಶ್ ನಟರಂಗ, ಹನುಮಂತ ರಾಜು, ಜಯಂತಿ, ಯಮುನ, ನಾಗಶ್ರೀ, ಪೂಜಾ, ಲಕ್ಷ್ಮೀನರಸಿಂಹ, ಪ್ರಸಾದ್, ವರ್ಧನ್ ತೀರ್ಥಹಳ್ಳಿ, ರಜನಿಕಾಂತ್ ಎಚ್.ಎಂ.ಟಿ ವಿಜಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರಘು ಧನ್ವಂತ್ರಿ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಚಿದಾನಂದ್ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.