ಬೆಂಗಳೂರು, ಜೂ.7- ದೇಶದ ಜನರ ಆರೋಗ್ಯದ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಶೇಷ ಕಾಳಜಿ ಹೊಂದಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಹೇಳಿದ್ದಾರೆ.
ನಗರದ ಬಸವನಗುಡಿಯಲ್ಲಿ ಆಯೋಜಿಸಿದ್ದ ಪ್ರಧಾನಮಂತ್ರಿ ಜನ ಔಷಧಿ ಪರಿಯೋಜನೆಯ ನೇರ ಸಂಭಾಷಣೆಯನ್ನು ಜನರೊಂದಿಗೆ ವೀಕ್ಷಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶಾದ್ಯಂತ 3603 ಜನ ಔಷಧಿ ಕೇಂದ್ರಗಳ ಮೂಲಕ ಜನ ಔಷಧಿ ಪರಿಯೋಜನೆ ಜಾರಿಯಲ್ಲಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಹಲವಾರು ಆರೋಗ್ಯದ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಅದರಲ್ಲಿ ಮುಖ್ಯವಾಗಿ ಜನ ಔಷಧ ಕಾರ್ಯಕ್ರಮ ಬಹಳ ಪರಿಣಾಮಕಾರಿಯಾದ ಯೋಜನೆ. ಸಾವಿರಾರು ರೂ.ಗಳನ್ನು ತೆತ್ತು ದುಬಾರಿ ಔಷಧಗಳನ್ನು ತಗೆದುಕೊಳ್ಳಲಾಗದೆ ಬಳಲುತ್ತಿದ್ದ ರೋಗಿಗಳ ಪಾಲಿಗೆ ಇದು ಆಶಾಕಿರಣವಾಗಿದೆ. ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳನ್ನು ನೀಡುತ್ತಿದೆ ಮೋದಿ ಸರ್ಕಾರ ಎಂದು ಹೇಳಿದರು.
ಇದೇ ವೇಳೆ ಸ್ಟಂಟ್ ಹಾಗೂ ಕಾಲಿನ ಮಂಡಿ ಚಿಪ್ಪು ಉಪಕರಣಗಳ ಬೆಲೆ ಇಳಿಕೆಯಿಂದಾಗಿ ಶಸ್ತ್ರ ಚಿಕಿತ್ಸೆಗಳು ಬಡವರಿಗೂ ಕೈಗೆಟಕುವ ಹಾಗೆ ಆಗಿವೆ. ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿತ್ವ ಹಾಗೂ ಮಾರ್ಗದರ್ಶನವೇ ಕಾರಣ ಎಂದರು.
ಶಾಸಕ ರವಿ ಸುಬ್ರಮಣ್ಯ, ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ, ಪಾಲಿಕೆ ಸದಸ್ಯರಾದ ಕಟ್ಟೆ ಸತ್ಯನಾರಾಯಣ, ಸಂಗಾತಿ ವೆಂಕಟೇಶ್, ಶ್ಯಾಮಲಾ ಕುಮಾರ್, ಸವಿತಾ ಮಾಯಣ್ಣಗೌಡ, ನಂದಿನಿ ವಿಜಯವಿಠ್ಠಲ ಸೇರಿದಂತೆ ಮಹಾನಗರ ಪಾಲಿಕೆ ಪ್ರೌಢಶಾಲಾ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.