ಪೀಟರ್ಮಾರ್ಟಿಸ್ಬರ್ಗ್, ಜೂ.7-ಅನ್ಯಾಯ ಮತ್ತು ತಾರತಮ್ಯಕ್ಕೆ ಒಳಗಾದ ಮಂದಿಗೆ ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಭರವಸೆಯ ಧ್ವನಿಯಾಗಿದ್ದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಜೂನ್ 7, 1893ರಲ್ಲಿ ಯುವ ವಕೀಲರಾಗಿದ್ದ ಮೋಹನ್ದಾಸ್ ಕರಮ್ಚಂದ್ ಗಾಂಧಿ ಅವರನ್ನು ಶ್ವೇತ ವರ್ಣಿಯರಿಗೆ ಮಾತ್ರ ಮೀಸಲಿದ್ದ ರೈಲು ಬೋಗಿಯಿಂದ ಹೊರಕ್ಕೆ ಎಸೆಯಲಾಯಿತು. ಆ ಘಟನೆ ಗಾಂಧೀಜಿ ಬದುಕಿನ ಮೇಲೆ ಮಹತ್ವದ ಪರಿಣಾಮ ಬೀರಿತು. ಆ ಘಟನೆ ಸಂಭವಿಸಿ ಇಂದಿಗೆ 125 ವರ್ಷ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಸುಷ್ಮಾ ತನ್ನಿಮಿತ್ತ ಇಲ್ಲಿನ ಸಿಟಿ ಹಾಲ್ನಲ್ಲಿ ನಡೆದ 125ನೇ ವರ್ಷಾಚರಣೆ ಸಂದರ್ಭದಲ್ಲಿ ಪ್ರಧಾನ ಭಾಷಣ ಮಾಡಿದರು. ವರ್ಣಬೇಧ ನೀತಿ ವಿರುದ್ಧ ಹೋರಾಟದಲ್ಲಿ ದಕ್ಷಿಣ ಆಫ್ರಿಕಾದ ಜನರಿಗೆ ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬೆಂಬಲ ನೀಡುತ್ತಿರುವುದನ್ನು ಸಚಿವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ವಸಾಹತುಶಾಹಿ ಅಥವಾ ವರ್ಣಬೇಧ ನೀತಿ ವಿರುದ್ಧ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ದಕ್ಷಿಣ ಆಫ್ರಿಕಾ ಮಹಾ ನಾಯಕ ನೆಲ್ಸೆನ್ ಮಂಡೇಲಾ ಅವರು ಧ್ವನಿ ಎತ್ತಿದರು. ಅನ್ಯಾಯ ಮತ್ತು ತುಳಿತಕ್ಕೆ ಒಳಗಾದವರು ಹಾಗೂ ತಾರತಮ್ಯಕ್ಕೆ ಗುರಿಯಾದ ಮಂದಿಗೆ ಭರವಸೆಯ ಬೆಳಕಾಗಿದ್ದರು ಎಂದು ಸುಷ್ಮಾ ಸ್ಮರಿಸಿದರು. ತಮ್ಮ ಉದಾತ್ತ ಮೌಲ್ಯಗಳು ಮತ್ತು ತತ್ತ್ವಾದರ್ಶಗಳ ಮೂಲಕ ಮುಂದಿನ ಜನಾಂಗಕ್ಕೂ ಈ ಮಹಾನಾಯಕರು ಭರವಸೆಯ ದೀವಿಗೆಯಾಗಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.