ಬೆಂಗಳೂರು, ಜೂ.7 ಮಾದಿಗ ಸಮುದಾಯದ ಏಕೈಕ ಶಾಸಕಿ ರೂಪ ಶಶಿಧರ್ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ರಾಜ್ಯದಾದ್ಯಂತ ಎಲ್ಲಾ ಕಾಂಗ್ರೆಸ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾದಿಗ ದಂಡೋರ ಸಮಿತಿಯ ಅಧ್ಯಕ್ಷ ಎಮ್.ಸಿ.ಶ್ರೀನಿವಾಸ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಸಮುದಾಯವನ್ನು ಕೇವಲ ಮತಬ್ಯಾಂಕ್ಗಾಗಿ ಕಾಂಗ್ರೆಸ್ ಪಕ್ಷ ಬಳಸಿಕೊಂಡಿದೆ, ಅಧಿಕಾರ ನೀಡುವಾಗ ಉದ್ದೇಶಪೂರಕವಾಗಿ ವಂಚಿಸಿದೆ, ಪಕ್ಷದ ವತಿಯಿಂದ ಬಿ.ಫಾರಂ ನೀಡುವಾಗ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದರು ಎಂದು ಆರೋಪಿಸಿದರು.
ಕಳೆದ ಬಾರಿ ಚುನಾವಣೆಯಿಂದಲೂ ಸಹ ಟಿಕೆಟ್ ನೀಡುವಲ್ಲಿ ಅನ್ಯಾಯ ಮಾಡಿದ್ದಾರೆ. ನಮ್ಮ ಸಮುದಾಯಕ್ಕೆ ಯಾವುದೇ ರೀತಿಯ ಸ್ಥಾನ ಮಾನ ನೀಡಿಲ್ಲ ಎಂದು ತಿಳಿಸಿದರು.
ರೂಪ ಶಶಿಧರ್ ಅವರು 5ವರ್ಷಗಳಿಂದ ಪಕ್ಷದಲ್ಲಿ ಸತತವಾಗಿ ಕಾರ್ಯ ನಿರ್ವಹಿಸಿ, ಕ್ಷೇತ್ರದಲ್ಲಿ ಜನರ ಮನ ಗೆದ್ದು 40ಸಾವಿರಕ್ಕೂ ಅಧಿಕ ಮತಗಳಿಂದ ಜಯಶೀಲರಾಗಿದ್ದಾರೆ, ಆದ್ದರಿಂದ ಇವರಿಗೆ ಸಚಿವ ಸ್ಥಾನ ನೀಡಿ ನಮ್ಮ ಸಮುದಾಯದವರಿಗೆ ಸರಿಸಮನಾದ ಸ್ಥಾನ ಮಾನ ನೀಡಬೇಕೆಂದು ಮನವಿ ಮಾಡಿದರು.
ಮಾದಿಗ ದಂಡೋರ ಸಮಾಜದ ರಾಜ್ಯ ಉಸ್ತುವಾರಿ ಕೋಲಾ ವೆಂಕಟೇಶ್, ಸಮಿತಿಯ ಉಪಾಧ್ಯಕ್ಷ ನರಸಪ್ಪ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಎಮ್.ಪಿ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.