ಬೆಂಗಳೂರು, ಜೂ.5- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ನೂತನ ಸಚಿವರು ನಾಳೆ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಲಿದ್ದು, ಆ ಮೂಲಕ ರಾಜ್ಯದಲ್ಲಿ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ.
ಜೆಡಿಎಸ್ ಪಕ್ಷದಿಂದ ಯಾರು ಸಚಿವರಾಗಬೇಕೆಂಬುದು ಬಹುತೇಕ ಆಖೈರುಗೊಂಡಿದೆ. ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಅದರಂತೆ ಬಂಡೆಪ್ಪ ಕಾಶಂಪೂರ್, ಜಿ.ಟಿ.ದೇವೇಗೌಡ, ಎಚ್.ಡಿ.ರೇವಣ್ಣ, ಎಂ.ಸಿ.ಮನಗೋಳಿ, ಸಿ.ಎಸ್.ಪುಟ್ಟರಾಜು, ಎಂ.ಆರ್.ಶ್ರೀನಿವಾಸ್ (ವಾಸು), ಕೆ.ಶ್ರೀನಿವಾಸ್‍ಗೌಡ, ವೆಂಕಟರಾವ್ ನಾಡಗೌಡ, ಬಿ.ಎಂ.ಫಾರೂಕ್, ಬಸವರಾಜ ಹೊರಟ್ಟಿ, ಮಹೇಶ್ (ಬಿಎಸ್‍ಪಿ) ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ಎಚ್.ವಿಶ್ವನಾಥ್ ಅವರನ್ನು ವಿಧಾನಸಭೆ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.
ಜಿಲ್ಲಾ ಪ್ರಾತಿನಿಧ್ಯ, ಜಾತಿವಾರು ಆದ್ಯತೆ, ಪಕ್ಷನಿಷ್ಠೆ, ಸೇವಾ ಹಿರಿತನ ಮುಂತಾದವುಗಳನ್ನು ಪರಿಗಣಿಸಿ ಪಕ್ಷದ ಮುಖಂಡರು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಸಚಿವರ ಪಟ್ಟಿ ಅಂತಿಮಗೊಳಿಸಲು ಅತ್ತ ದೆಹಲಿಯಲ್ಲಿ ಕಸರತ್ತು ಮುಂದುವರಿದಿದೆ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ನೇತೃತ್ವದಲ್ಲಿ ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ವರಿಷ್ಠರಾದ ಗುಲಾಂ ನಬಿ ಆಜಾದ್, ಅಹಮ್ಮದ್ ಪಟೇಲ್, ಅಶೋಕ್ ಗೆಹ್ಲೋಟ್, ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್, ಬಿ.ಕೆ.ಹರಿಪ್ರಸಾದ್ ಮುಂತಾದವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಜಾತಿವಾರು, ಪ್ರಾದೇಶಿಕವಾರು, ಸಾಮಾಜಿಕ ನ್ಯಾಯ, ಸೇವಾ ಹಿರಿತನ, ಪಕ್ಷದ ಗೆಲುವಿಗೆ ಶಾಸಕರ ಶ್ರಮ ಆಧರಿಸಿ ಹಿರಿಯರು, ಕಿರಿಯರು, ವಿಧಾನ ಪರಿಷತ್ ಸದಸ್ಯರು, ಮಹಿಳೆಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಯಿತು.
ಅದರಂತೆ ರೋಷನ್ ಬೇಗ್, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್, ತುಕಾರಾಂ, ಬಸವರಾಜ ಪಾಟೀಲ್ ಹುಮ್ನಾಬಾದ್, ಎಂ.ಟಿ.ಬಿ.ನಾಗರಾಜ್, ಸಿ.ಎಸ್.ಶಿವಳ್ಳಿ, ಪ್ರತಾಪ್‍ಚಂದ್ರ ಶೆಟ್ಟಿ, ಉಮೇಶ್ ಜಾದವ್, ಶಾಮನೂರು ಶಿವಶಂಕರಪ್ಪ, ಪ್ರಿಯಾಂಕ್ ಖರ್ಗೆ, ಶಿವಶಂಕರ್‍ರೆಡ್ಡಿ, ಲಕ್ಷ್ಮಿ ಹೆಬ್ಬಾಳ್ಕರ್, ರೂಪಾ ಶಶಿಧರ್, ಆರ್.ವಿ.ದೇಶಪಾಂಡೆ ಅವರು ಸಂಪುಟಕ್ಕೆ ಸೇರುವುದು ಬಹುತೇಕ ಖಚಿತವಾಗಿದೆ.
ಇನ್ನು ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್ ಅವರನ್ನು ಸಂಪುಟಕ್ಕೆ ಸೇರಿಸಬೇಕೆಂಬ ಒತ್ತಡ ಹೆಚ್ಚಾಗಿ ಕೇಳಿಬಂದಿದೆ.
ಕಳೆದ ಸಂಪುಟದಲ್ಲಿ ಒಬ್ಬರೇ ಮಹಿಳೆಯರಿದ್ದು, ಈ ಬಾರಿ ಮೈತ್ರಿ ಸರ್ಕಾರವಿರುವುದರಿಂದ ಒಬ್ಬರು ಮಹಿಳೆಯರಿಗೆ ಅವಕಾಶ ನೀಡಿದರೆ ಸಾಕು ಎಂದು ಹಲವರು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅಥವಾ ರೂಪಾ ಶಶಿಧರ್ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂಸದ, ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರು ತಮ್ಮ ಪುತ್ರಿ ರೂಪಾ ಶಶಿಧರ್ ಅವರಿಗೆ ಸಂಪುಟದಲ್ಲಿ ಸ್ಥಾನ ದೊರಕಿಸಿಕೊಡುವ ಪ್ರಯತ್ನ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಸಚಿವ ಸಂಪುಟ ಸೇರುವವರ ಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಲಾಗಿತ್ತು. ಆದರೂ ಎಲ್ಲ ನಾಯಕರೊಂದಿಗೆ ಚರ್ಚಿಸಿ ಒಮ್ಮತದ ತೀರ್ಮಾನ ಕೈಗೊಂಡು 17 ರಿಂದ 18 ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲು ಮುಂದಾಗಿದೆ. ಇನ್ನುಳಿದ ಸಚಿವರನ್ನು ಮುಂದಿನ ಹಂತದಲ್ಲಿ ಸಂಪುಟಕ್ಕೆ ಕಾಂಗ್ರೆಸ್ ಸೇರ್ಪಡೆ ಮಾಡಲಿದೆ ಎನ್ನಲಾಗಿದೆ.
ಒಟ್ಟಾರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಂಪುಟಕ್ಕೆ ಸೇರುವ ಸಚಿವರ ಪಟ್ಟಿ ಬಹುತೇಕ ಅಂತಿಮಗೊಂಡಂತಿದೆ. ಇಂದು ಸಂಜೆ ಅಧಿಕೃತವಾಗಿ ಪ್ರಕಟಗೊಂಡು ನಾಳೆ ಮಧ್ಯಾಹ್ನ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನಾಳೆ ಮಧ್ಯಾಹ್ನ 2 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭವಿದ್ದು, ಈ ಸಂದರ್ಭದಲ್ಲಿ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಬದಲಾವಣೆಯಾದರೂ ಆಶ್ಚರ್ಯವಿಲ್ಲ.