ಬೆಂಗಳೂರು, ಜೂ.5- ನಾನು ಸಂಪುಟ ದರ್ಜೆಯ ಸಚಿವನಾಗಿ ಕೆಲಸ ಮಾಡಿದ ಹಿರಿಯ ವ್ಯಕ್ತಿ. ನನಗೆ ವಿಧಾನ ಸಭೆಯ ಉಪಾಧ್ಯಕ್ಷ ಸ್ಥಾನ ಬೇಡ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ಅವರು ಪ್ರಸಕ್ತ ರಾಜಕೀಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ವಿಧಾನಸಭೆಯ ಉಪಾಧ್ಯಕ್ಷರಾಗಿ ಕೆಲಸ ಮಾಡುವಂತೆ ದೇವೇಗೌಡರ ಸಲಹೆ ನೀಡಿದ್ದಾರೆ. ಅದಕ್ಕೆ ಒಪ್ಪದ ವಿಶ್ವನಾಥ್ ಅವರು ಪಕ್ಷದಲ್ಲಿರುವ ಕಿರಿಯರಿಗೆ ಈ ಸ್ಥಾನ ನೀಡಿ. ಸಂಪುಟದಲ್ಲಿ ಕೆಲಸ ಮಾಡಿದ ನಾನು ಮತ್ತೆ ಉಪಾಧ್ಯಕ್ಷನಾಗಿ ಕೂರಲಾರೆ. ಸಕ್ರಿಯ ರಾಜಕೀಯರಲ್ಲೇ ಇರುತ್ತೇನೆ. ಸಾಧ್ಯವಾದರೆ ಸಂಪುಟದಲ್ಲಿ ಅವಕಾಶ ನೀಡಿ. ಇಲ್ಲವಾದರೆ ಬೇಸರ ಇಲ್ಲ ಎಂದಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ ಜಿ.ಟಿ.ದೇವೇಗೌಡರಿಗೆ ಸಚಿವ ಸ್ಥಾನ ನೀಡಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಇಚ್ಚಿಸಿದ್ದಾರೆ. ಹಿರಿಯರಾದ ವಿಶ್ವನಾಥ್ ಜೆಡಿಎಸ್ ಇತ್ತೀಚೆಗೆ ಸೇರಿದ್ದು, ಪಕ್ಷದ ಚಿನ್ನೆಯಡಿ ಮೊದಲ ಬಾರಿ ಶಾಸಕರಾಗಿದ್ದಾರೆ. ಹಾಗಾಗಿ ಅವರಿಗಿಂತ ಪಕ್ಷ ನಿಷ್ಠರಾದ ಜಿ.ಟಿ.ದೇವೇಗೌಡರಿಗೆ ಸಚಿವ ಸ್ಥಾನ ನೀಡುವ ಚಿಂತನೆ ನಡೆದಿದೆ.
ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಬೇಕು ಎಂದು ವರಿಷ್ಠರ ಬಳಿ ಮನವಿ ಮಾಡಿಲ್ಲ. ದೇವೇಗೌಡರು ನಮಗೆ ರಾಜಕೀಯ ಪುನರ್ಜನ್ಮ ನೀಡಿದ್ದಾರೆ. ಪಕ್ಷ ನಿರ್ಧರಿಸಿ ಸಚಿವ ಸ್ಥಾನ ನೀಡಿದರೆ ಉತ್ತಮವಾಗಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.
ಸಚಿವ ಸ್ಥಾನ ನೀಡದಿದ್ದರೂ ಬೇಸರ ಮಾಡಿಕೊಳ್ಳದೆ ಸರ್ಕಾರದ ಜತೆ ಎಡಬಲದಲ್ಲಿ ನಿಂತು ಕೆಲಸ ಮಾಡುತ್ತೇನೆ. ಸಚಿವನಾಗಿಯೇ ಕೆಲಸ ಮಾಡಬೇಕೆಂದೂ ಇಲ್ಲ ಎಂದರು.
ವಿಧಾನಸಭೆ ಉಪಾಧ್ಯಕ್ಷ ಸ್ಥಾನದ ಬಗ್ಗೆ ತಮ್ಮ ಹೆಸರು ಪ್ರಸ್ತಾಪವಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸಂಪುಟ ದರ್ಜೆ ಮಂತ್ರಿಯಾಗಿದ್ದವನು. ಯಾರಾದರೂ ಯುವಕರಿಗೆ ಉಪಸಭಾಧ್ಯಕ್ಷ ಸ್ಥಾನವನ್ನು ನೀಡಿ ತಯಾರು ಮಾಡಬೇಕು ಎಂದು ಪರೋಕ್ಷವಾಗಿ ತಮಗೆ ಆ ಸ್ಥಾನ ಬೇಡ ಎಂಬ ಸಂದೇಶ ರವಾನಿಸಿದರು.