ವಾಷಿಂಗ್ಟನ್, ಜೂ.5-ಕಳೆದ ವರ್ಷ ಕರ್ತವ್ಯದ ವೇಳೆ ಪ್ರಾಣಾರ್ಪಣೆ ಮಾಡಿದ ಕರ್ನಾಟಕದ ಹಿರಿಯ ಪತ್ರಕರ್ತೆ ಮತ್ತು ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಸೇರಿದಂತೆ ವಿವಿಧ ದೇಶಗಳ ಮಾಧ್ಯಮಗಳ 18 ಮಂದಿಯ ಹೆಸರುಗಳನ್ನು ಅಮೆರಿಕದ ಪ್ರತಿಷ್ಠಿತ ಜರ್ನಲಿಸ್ಟ್ ಮೊಮೊರಿಯಲ್ ಮ್ಯೂಸಿಯಂನಲ್ಲಿ ಸೇರ್ಪಡೆ ಮಾಡಲಾಗಿದೆ. ಭಾರತದ ಮತ್ತೊಬ್ಬ ಪತ್ರಕರ್ತ ಸುದೀಪ್ ದತ್ತ ಭೌಮಿಕ್ ಅವರೂ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ರಾಜಧಾನಿ ವಾಷಿಂಗ್ಟನ್ನಲ್ಲಿ ಇಂದು ನಡೆದ ಸಮಾರಂಭವೊಂದರಲ್ಲಿ ಪ್ರತಿಷ್ಠಿತ ನ್ಯೂಸಿಯಂನಿಂದ ಪತ್ರಕರ್ತರ ಸ್ಮರಣೆಗೆ 18 ಮಾಧ್ಯಮ ಸಾಧಕರ ಹೆಸರನ್ನು ಸೇರ್ಪಡೆ ಮಾಡಲಾಗಿದೆ.
ನ್ಯೂಸಿಯಂ-ಇದು ಪತ್ರಿಕಾ ಸ್ವಾತಂತ್ರ್ಯ, ವಿಶಿಷ್ಟ ಸಾಧನೆ ಮಾಡಿದ ಪತ್ರಕರ್ತರ ಹೆಸರು ಹಾಗೂ ಕರ್ತವ್ಯದ ವೇಳೆ ಪ್ರಾಣಾರ್ಪಣೆ ಮಾಡಿದ ಮಾಧ್ಯಮ ಮಂದಿಯ ಹೆಸರು ಹಾಗೂ ವಿಶ್ವದ ವಿವಿಧೆಡೆ ಪತ್ರಕರ್ತರು ಎದುರಿಸುತ್ತಿರುವ ಅಪಾಯಗಳ ಬಗ್ಗೆ ಬೆಳಕು ಚೆಲ್ಲುವ ಮ್ಯೂಸಿಯಂ ಇದಾಗಿದೆ. ಪ್ರತಿ ವರ್ಷ ಇಂಥ ಪತ್ರಕರ್ತರ ಹೆಸರುಗಳನ್ನು ಈ ಮ್ಯೂಸಿಯಂಗೆ ಸೇರ್ಪಡೆ ಮಾಡಲಾಗುತ್ತದೆ. ಈ ವರ್ಷ ಕಳೆದ ಸಾಲಿನ(2017)ನಲ್ಲಿ ಕರ್ತವ್ಯದ ವೇಳೆ ಮೃತಪಟ್ಟು ಗೌರಿ ಲಂಕೇಶ್. ಸುದೀಪ್ ದತ್ತ ಭೌಮಿಕ ಸೇರಿದಂತೆ 18 ಪತ್ರಕರ್ತರಿಗೆ ಸ್ಮರಣೆ ಗೌರವ ಲಭಿಸಿದೆ. ಇವರಲ್ಲಿ 8 ಮಂದಿ ಮಹಿಳೆಯರ ಹೆಸರು ನ್ಯೂಸಿಯಂನಲ್ಲಿ ಸೇರಿದೆ. 55 ವರ್ಷದ ಗೌರಿ ಲಂಕೇಶ್ ಅವರು ಜಾತಿ ವ್ಯವಸ್ಥೆ ಹಾಗೂ ಹಿಂದು ಮೂಲಭೂತವಾದದ ವಿರುದ್ಧ ನಿರ್ಭೀತ ಲೇಖನಗಳ ಮೂಲಕ ಸಮಾಜವನ್ನು ಚಿಂತನೆಯ ಓರೆಗೆ ಹಚ್ಚಿದ್ದರು. ಪ್ರಗತಿಪರ ಚಿಂತಕರು ಹಾಗೂ ಪತ್ರಕರ್ತರೂ ಆಗಿದ್ದ ಅವರನ್ನು ಸೆಪ್ಟೆಂಬರ್ 5, 2017ರಲ್ಲಿ ಬೆಂಗಳೂರಿನ ಅವರ ಮನೆ ಮುಂದೆಯೇ ದ್ವಿಚಕ್ರವಾಹನದಲ್ಲಿ ಬಂದ ಹಂತಕರು ಗುಂಡು ಹಾರಿಸಿ ಕೊಂದು ಪರಾರಿಯಾದರು ಎಂದು ಗೌರಿ ಬಗ್ಗೆ ನ್ಯೂಸಿಯಂ ತನ್ನ ಸಂಕ್ಷಿಪ್ತ ವಿವರಣೆಯಲ್ಲಿ ತಿಳಿಸಿದೆ.
ಈಶಾನ್ಯ ರಾಜ್ಯ ತ್ರಿಪುರದ ಸ್ಥಳೀಯ ದಿನ ಪತ್ರಿಕೆಯ ವರದಿಗಾರ ಸುದೀಪ್ ದತ್ತ ಅವರು ಪೆÇಲೀಸ್ ಭ್ರಷ್ಟಾಚಾರವನ್ನು ತನಿಖಾ ವರದಿಗಳ ಮೂಲಕ ಬಯಲಿಗೆಳೆದಿದ್ದರು. ನವೆಂಬರ್ 21, 2017ರಲ್ಲಿ ಅವರನ್ನು ಹಂತಕರು ಗುಂಡಿಟ್ಟು ಕೊಂದಿದ್ದರು.