ಪ್ರತಿಯೊಬ್ಬರಿಗೂ ಸ್ವಂತ ಮನೆ ಕನಸನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜೂ.5- ಪ್ರತಿಯೊಬ್ಬರಿಗೂ ಸ್ವಂತ ಮನೆ ಕನಸನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರದಿಂದ ವಸತಿ ವಲಯವನ್ನು ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ರಾಜಧಾನಿ ನವದೆಹಲಿಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ(ಪಿಎಂಎವೈ) ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ, ಯಾವುದೇ ಅಡ್ಡಿ-ಅಡಚಣೆಗಳಿಲ್ಲದೇ ಜನರು ತಮ್ಮ ಸ್ವಂತ ಮನೆಗಳನ್ನು ಹೊಂದಲು ಮಧ್ಯವರ್ತಿಗಳು, ಭ್ರಷ್ಟಾಚಾರದಿಂದ ವಸತಿ ವಲಯವನ್ನು ಮುಕ್ತಗೊಳಿಸಲು ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದರು.
ಕೈಗೆಟುಕುವ ದರದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡವರಿಗೆ ಮನೆಗಳನ್ನು ಕ್ಷಿಪ್ರವಾಗಿ ನಿರ್ಮಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುವುದು ಎಂದು ಅವರು ತಿಳಿಸಿದರು.
ದೇಶದ ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದಬೇಕೆಂಬ ಆಕಾಂಕ್ಷೆ ಇರುತ್ತದೆ. ಅದನ್ನು ಸಕಾರಗೊಳಿಸಲು ತಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು.
ಮಹಿಳೆಯರು, ದಿವ್ಯಾಂಗರು(ವಿಕಲ ಚೇತನರು), ಎಸ್‍ಸಿ, ಎಸ್‍ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ವಸತಿ ನೀಡಿಕೆಯಲ್ಲಿ ಆದ್ಯತೆ ನೀಡಲಾಗುವುದು ಎಂದು ಮೋದಿ ಹೇಳಿದರು.
ಪಿಎಂಎವೈನಿಂದ ನಮ್ಮ ನಾಗರಿಕರ ಘನತೆ-ಗೌರವ ಹೆಚ್ಚಾಗಿದೆ. ಇದರಿಂದ ನಮ್ಮ ಜನರಿಗೆ ಉದ್ಯೋಗಾವಕಾಶಗಳು ಲಭಿಸಿದೆ. ಇದೇ ವೇಳೆ ಉತ್ತಮ ಗುಣಮಟ್ಟದ ಮನೆಗಳನ್ನು ತ್ವರಿತವಾಗಿ ನಿರ್ಮಿಸಲು ಕೌಶಲ್ಯಾಭಿವೃದ್ದಿ ಕಾರ್ಯದಲ್ಲಿ ನಾವು ತೊಡಗಿದ್ದೇವೆ ಎಂದು ಪ್ರಧಾನಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ