ಬೆಂಗಳೂರು: ಮೆಟ್ರೊ ನೌಕರರ ಬೇಡಿಕೆಗೆ ಸಂಬಂಧ ರಾಜ್ಯ ಸರ್ಕಾರ ಮಾತುಕತೆಗೆ ಮುಂದಾಗಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಈ ಕುರಿತಂತೆ ಮುಂದಿನ ಹತ್ತು ದಿನಗಳಲ್ಲಿ ರಾಜ್ಯ ಸರ್ಕಾರ, ಬಿಎಂಆರ್‌ಸಿಎಲ್ ಹಾಗೂ ಮೆಟ್ರೊ ನೌಕರರ ಸಂಘ ತ್ರಿಪಕ್ಷೀಯ ಮಾತುಕತೆ ನಡೆಸುವಂತೆಯೂಞ ತಿಳಿಸಿದೆ.
ಈ ಕುರಿತ ಪ್ರಕರಣವನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಸಂಬಂಧ ನೌಕರರು ಹಾಗೂ ಸಂಘದ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸುವಂತೆ ನ್ಯಾಯಪೀಠ ಆದೇಶಿಸಿದೆ.
ನೌಕರರ ಆರ್ಥಿಕ ಮತ್ತು ಆರ್ಥಿಕೇತರ ಸಮಸ್ಯೆಗಳನ್ನು ಆಲಿಸಿ. ಅವುಗಳನ್ನು ಪಟ್ಟಿ ಮಾಡಿಕೊಳ್ಳಿ. ಹಣಕಾಸು ತಜ್ಞರ ಜೊತೆ ಚರ್ಚಿಸಿ. ಯಾವ ರೀತಿ ಸಮಸ್ಯೆ ಬಗೆಹರಿಸಬಹುದು ಎಂಬುದರ ಬಗ್ಗೆ ಚಿಂತನ–ಮಂಥನ ನಡೆಸಿ. ನಂತರ ಮುಂದೇನು ಮಾಡಬಹುದೆಂದು ನೋಡೋಣ ಎಂದು ನ್ಯಾಯಪೀಠ ಸರ್ಕಾರಕ್ಕೆ ಸೂಚಿಸಿದೆ.
ಈ ಮಧ್ಯೆ ನೌಕರರು ಮುಷ್ಕರಕ್ಕೆ ಮುಂದಾಗಬಾರದು. ಅಂತೆಯೇ ನೌಕರರ ವಿರುದ್ಧ ಬಿಎಂಆರ್‌ಸಿಎಲ್ ಕೂಡಾ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ತಾಕೀತು ಮಾಡಿದೆ. ವಿಚಾರಣೆಯನ್ನು ಇದೇ ಜೂನ್ 19 ಕ್ಕೆ ಮುಂದೂಡಲಾಗಿದೆ.