ನವದೆಹಲಿ:ಜೂ-4: ಮಧ್ಯಪ್ರದೇಶ ನಕಲಿ ಮತದಾರರ ಪಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತನಿಖೆಗೆ ಆದೇಶ ನೀಡಿದೆ.
ಪ್ರಸ್ತುತ ಕಾಂಗ್ರೆಸ್ ಪಕ್ಷದ ಆರೋಪದಂತೆ ಪತ್ತೆಯಾಗಿರುವ ನಕಲಿ ಮತದಾರರ ಪಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಚುನಾವಣಾ ಆಯೋಗ ತಂಡ ರಚನೆ ಮಾಡಿದೆ. ಮತದಾರರ ಪಟ್ಟಿಯಲ್ಲಿದ್ದಿರಬಹುದಾದ ದೋಷಗಳ ಕುರಿತು ತನಿಖೆ ನಡೆಸುವಂತೆ ಚುನಾವಣಾ ಆಯೋಗ ಈ ತಂಡಕ್ಕೆ ಆದೇಶಿಸಿದೆ.
ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಮತದಾರರ ಪಟ್ಟಿಯಲ್ಲಿ 60 ಲಕ್ಷ ನಕಲಿ ಮತದಾರರ ಹೆಸರು ಸೇರಿಸಿದೆ ಎಂದು ಕಾಂಗ್ರೆಸ್ನ ಆರೋಪದ ಬೆನ್ನಲ್ಲೇ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ. ತಲಾ ಇಬ್ಬರು ಅಧಿಕಾರಿಗಳು ಇರುವ ನಾಲ್ಕು ತಂಡಗಳು ತನಿಖೆ ನಡೆಸಲಿದ್ದು, ಜೂನ್ 7ರಂದು ವರದಿ ಸಲ್ಲಿಸಲಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಮಧ್ಯ ಪ್ರದೇಶ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಲೀನಾ ಸಿಂಗ್ ಅವರು, ‘ಮತದಾರರ ಪಟ್ಟಿ ಕುರಿತಂತೆ ಕಾಂಗ್ರೆಸ್ ನಿಯೋಗ ದೂರಿನಲ್ಲಿ ಪ್ರಸ್ತಾಪಿಸಿರುವ ವಿಷಯಗಳು ಹಾಗೂ ಜನಸಂಖ್ಯೆ ಆಧಾರದ ಮೇಲೆ ಮತದಾರರ ಪಟ್ಟಿಯಲ್ಲಿ ಮಾಡಲಾಗಿರುವ ದಾಖಲಾತಿ ಕುರಿತಂತೆ ಕೂಲಂಕಷ ತನಿಖೆ ನಡೆಸುವಂತೆ ತಂಡಗಳಿಗೆ ಸೂಚಿಸಲಾಗಿದೆ.
ಕಳೆದ ಫೆಬ್ರವರಿಯಲ್ಲಿಯೂ ಸಹ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ಮಧ್ಯಪ್ರದೇಶ ಮತದಾರರ ಪಟ್ಟಿಯ ವಿಚಾರವಾಗಿ ದೂರು ನೀಡಿತ್ತು. ಮುಕ್ತ, ನ್ಯಾಯಸಮ್ಮತವಾದ ಚುನಾವಣೆಗಳಿಗೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿತ್ತು. ಏಪ್ರಿಲ್ ತಿಂಗಳಲ್ಲಿ ಮಧ್ಯಪ್ರದೇಶ ಮತದಾರರ ಪಟ್ಟಿಯಲ್ಲಿ ಆರು ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಮತ್ತೆ ಮತದಾರ ಪಟ್ಟಿಯನ್ನು ನವೀಕರಣಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.