ರಾಯಚೂರು:ಜೂ-3: ಪ್ರಧಾನಿ ಮೋದಿಯವರು ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಕಪ್ಪು ಹಣ ತರುವ ಭರವಸೆ ಈಡೇರಿಸಿಲ್ಲ ಎಂದು ಪೇಜಾವರದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂತ್ರಾಲಯದಲ್ಲಿ ಚಂದ್ರಿಕಾ ತಾತ್ಪರ್ಯ ಮಂಗಳೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಶ್ರೀಗಳು, ಗಂಗಾ ನದಿ ಶುದ್ಧೀಕರಣದ ಭರವಸೆಯೂ ಈಡೇರಿಸಿಲ್ಲ. ಇನ್ನೊಂದು ವರ್ಷ ಅವಧಿಯಲ್ಲಿ ಭರವಸೆ ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಿ. ಅವರ ಅಚ್ಛೇ ದಿನ್ ಇನ್ನೂ ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಆರ್ಥಿಕತೆ ಸುಧಾರಣೆಗೂ ಸಾಕಷ್ಟು ಕ್ರಮ ವಹಿಸಿದ್ದಾರೆ. ಶ್ರೀಮಂತರಿಗೂ ಭ್ರಷ್ಟಾಚಾರ ಮಾಡಲಾಗದಂಥ ಸನ್ನಿವೇಶ ನಿರ್ಮಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎನ್ನಲಿಕ್ಕಾಗದು. ಅದು ಮತದಾರರ ಮನಸಿನ ಮೇಲಿದೆ. ಮೋದಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಉಡುಪಿ ಮಠದಲ್ಲಿ ಜೂ.13ಕ್ಕೆ ಇಫ್ತಾರ್ ಕೂಟ ಆಯೋಜನೆ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಈ ಬಗ್ಗೆ ಮುಸ್ಲಿಮರಲ್ಲಿಯೇ ಸಂಕೋಚವಿದೆ. ಆದರೆ, ಆಯೋಜನೆಗೆ ಯಾವುದೇ ಮಠದ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.