ಬೆಂಗಳೂರು, ಜೂ.2-ಲಿಂಗಾಯತ-ಒಕ್ಕಲಿಗದಂತಹ ಪ್ರಬಲ ಸಮುದಾಯಗಳು ಕಾಂಗ್ರೆಸ್ ವಿರುದ್ಧ ನಿಲ್ಲಲು ಕಾರಣವೇನು ಎಂಬ ಬಗ್ಗೆ ಕಾರಣಗಳನ್ನು ಪತ್ತೆ ಹಚ್ಚಬೇಕು ಮತ್ತು ಮುಂದಿನ ದಿನಗಳಲ್ಲಿ ಪ್ರಬಲ ಸಮುದಾಯಗಳು ಕಾಂಗ್ರೆಸ್ ಜತೆ ಗುರುತಿಸಿಕೊಳ್ಳುವಂತೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿಂದು ಸರ್ದಾರ್ ಪಟೇಲ್ ಭವನದಲ್ಲಿ ಕೆಪಿಸಿಸಿ ಪದಾಧಿಕಾರಿಗಳು,ಜಿಲ್ಲಾಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರ ಜೊತೆ ಸಭೆ ನಡೆಸಿ ಅವರು ಮಾತನಾಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗದ ಬಗ್ಗೆ ಸಭೆಯಲ್ಲಿ ಆತ್ಮಾವಲೋಕನ ನಡೆಯಿತು.
ಅಧ್ಯಕ್ಷರಾಗಿರುವ ಪರಮೇಶ್ವರ್ ಅವರಿಗೆ ಇದು ಕೊನೆ ಸಭೆ ಎಂದು ಹೇಳಲಾಗುತ್ತಿದೆ. ಸಭೆಯಲ್ಲಿ ಜಿಲ್ಲಾಧ್ಯಕ್ಷರು ಕಾಂಗ್ರೆಸ್ ನಿರೀಕ್ಷಿತ ಸಾಧನೆ ಮಾಡದಿರುವ ಬಗ್ಗೆ ಕಾರಣಗಳನ್ನು ವಿವರಿಸಿದರು.
ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೆಲವು ನಾಯಕರು, ಒಕ್ಕಲಿಗ ಸಮುದಾಯ ಕಾಂಗ್ರೆಸ್ ಮೇಲೆ ವಿಶ್ವಾಸವಿಡಲಿಲ್ಲ. ಇದು ನಮ್ಮ ಸೋಲಿಗೆ ಪ್ರಮುಖ ಕಾರಣ. ಲಿಂಗಾಯತ ಸಮುದಾಯ ಕೂಡ ಕಾಂಗ್ರೆಸ್ ಜೊತೆ ನಿಲ್ಲಲಿಲ್ಲ. ಹೀಗಾಗಿ ಉತ್ತರ ಕರ್ನಾಟಕ ಹಾಗೂ ಹಳೆಯ ಮೈಸೂರು ಭಾಗದಲ್ಲಿ ತಾವು ನಿರೀಕ್ಷೆಯಂತೆ ಗೆಲುವು ಸಾಧಿಸಲಾಗಲಿಲ್ಲ ಎಂದು ವಿಶ್ಲೇಷಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್ ಅವರು, ಮತ ಗಳಿಕೆಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಕಳೆದ ಬಾರಿ ಚುನಾವಣೆಗಿಂತ ಈ ಬಾರಿ ಮತ ಗಳಿಕೆ ಹೆಚ್ಚಾಗಿದೆ. ಕಾಂಗ್ರೆಸ್ ಒಟ್ಟಾರೆ ಶೇ.38.34 ರಷ್ಟು ಮತ ಗಳಿಸಿದೆ. ಆದರೂ ನಾವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಪ್ರಬಲ ಕೋಮುಗಳು ಕಾಂಗ್ರೆಸ್ ಜೊತೆ ನಿಲ್ಲದೆ ಇರುವುದೇ ಇದಕ್ಕೆ ಕಾರಣ. ಮುಂದಿನ ದಿನಗಳಲ್ಲಿ ನಾವು ಲೋಪಗಳನ್ನು ಸರಿಪಡಿಸಿಕೊಂಡು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೋಲಿಗೆ ಕಾರಣಗಳನ್ನು ಹುಡುಕಲು ಹೈಕಮಾಂಡ್ ಸಮಿತಿಯನ್ನು ರಚಿಸಿದೆ. ಸಮಿತಿ ವರದಿ ನೀಡಲು 20 ದಿನಗಳ ಕಾಲಾವಕಾಶ ನೀಡಲಾಗಿದೆ. ಅದಕ್ಕೂ ಮೊದಲು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮತ್ತು ಉಸ್ತುವಾರಿ ಜಿಲ್ಲಾ ಕಾರ್ಯದರ್ಶಿಗಳು ಕ್ಷೇತ್ರವಾರು ಸಮಗ್ರ ಅಧ್ಯಯನ ನಡೆಸಿ ವರದಿ ನೀಡಬೇಕು. ಸ್ಥಳೀಯವಾಗಿ ಯಾವ ಕಾರಣಕ್ಕಾಗಿ ಸೋಲುಂಟಾಯಿತು, ಯಾವೆಲ್ಲ ನಾಯಕರು ನಿಷ್ಕ್ರಿಯತೆ ತೋರಿಸಿದರು, ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ್ಯಾರು, ಯಾವ ಸಮುದಾಯಗಳು ಕಾಂಗ್ರೆಸ್ ಜತೆ ನಿಂತವು, ಯಾವ ಸಮುದಾಯಗಳು ಕಾಂಗ್ರೆಸ್ ವಿರುದ್ಧ ನಿಂತವು ಎಂಬೆಲ್ಲಾ ವಿವರಗಳನ್ನೊಳಗೊಂಡ ವರದಿಯನ್ನು ಇನ್ನು 10 ದಿನಗಳೊಳಗಾಗಿ ಕೆಪಿಸಿಸಿಗೆ ನೀಡಬೇಕು ಎಂದು ಪರಮೇಶ್ವರ್ ಸೂಚಿಸಿದರು.
ಮೈತ್ರಿ ಸರ್ಕಾರಕ್ಕೆ ಆಕ್ಷೇಪ:
ಕಾಂಗ್ರೆಸ್ ಆತ್ಮಾವಲೋಕನ ಸಭೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಗೆ ತೀವ್ರ ಆಕ್ಷೇಪ ಕೇಳಿ ಬಂದಿದೆ. ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ನಿಜ. ಆದರೆ ಮೈತ್ರಿ ಮಾಡಿಕೊಳ್ಳುವ ಮುನ್ನ ಕೆಳಹಂತದ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕಿತ್ತು. ರಾಜ್ಯಮಟ್ಟದಲ್ಲಿ ಏಕಾಏಕಿ ಮೈತ್ರಿ ಮಾಡಿಕೊಳ್ಳಲಾಗಿದೆ. ಹಳೇ ಮೈಸೂರು ಭಾಗದಲ್ಲಿ ನಾವು ಜೆಡಿಎಸ್ ವಿರುದ್ಧವೇ ನಾವು ಹೋರಾಡ ನಡೆಸಿದ್ದೆವು. ಈಗ ಜನರಿಗೆ ನಾವು ಉತ್ತರ ನೀಡಲಾಗುತ್ತಿಲ್ಲ. ತಳಮಟ್ಟದಲ್ಲಿ ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ ಎಂದು ಕೆಲವು ಜಿಲ್ಲಾಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣೆಯ ಬೆಳವಣಿಗೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ಯಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಸೋಲಿಸಲು ಬಿಜೆಪಿ ಕಾರ್ಯಕರ್ತರಿಗೆ, ಮುಖಂಡರಿಗೆ ವಿಪರೀತವಾದ ಕಿರುಕುಳ ನೀಡಿತ್ತು. ಸಿಬಿಐ ಅಧಿಕಾರಿಗಳು ಮುಖಂಡರ ಮನೆಗೆ ನುಗ್ಗಿ ಮೂರು ಕೋಟಿ ರೂಪಾಯಿ ಎಲ್ಲಿಟ್ಟಿದ್ದೀರಿ ಎಂದು ಪ್ರಶ್ನಿಸಿ ಕಿರುಕುಳ ನೀಡಿದರು. ಇವೆಲ್ಲವನ್ನು ನಾವು ಸಹಿಸಿಕೊಂಡು ನಾವು ಚುನಾವಣೆ ಎದುರಿಸಿ ಗೆದ್ದಿದ್ದೇವೆ ಎಂದು ಬೆಂಗಳೂರು ಉತ್ತರ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ಹೇಳಿದ್ದಾರೆ.
ಸಭೆಯಲ್ಲಿ ಮುಖಂಡರಾದ ರೋಷನ್‍ಬೇಗ್, ದಿನೇಶ್‍ಗುಂಡೂರಾವ್, ಸತೀಶ್ ಜಾರಕಿ ಹೊಳಿ, ಎಚ್.ಟಿ.ಸಾಂಗ್ಲಿಯಾನ, ಮೋಟಮ್ಮ, ರಾಣಿ ಸತೀಶ್, ಡಿ.ಆರ್.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.