ಬೆಂಗಳೂರು, ಫೆ.22-ರಸ್ತೆಗಳಲ್ಲಿ ಬಿದ್ದಿರುವ ಗುಂಡಿಯನ್ನೇ ಮುಚ್ಚಲು ಆಗುತ್ತಿಲ್ಲ. ಈಗ ವೈಟ್ಟಾಪಿಂಗ್ ಮಾಡ್ತಿದ್ದಾರೆ. ಮೈಮೇಲಿನ ಬಟ್ಟೆ ಅರಿದಿದೆ, ಹೊಸ ಕೋಟ್ ಒಲಿಸಿಕೊಂಡಂತಾಗಿದೆ ಈ ವೈಟ್ಟಾಪಿಂಗ್ ಕೆಲಸ ಎಂದು ಬಿಜೆಪಿ ಹಿರಿಯ ಸದಸ್ಯ ರಾಮಚಂದ್ರಗೌಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ನಗರದ ಬಹುತೇಕ ರಸ್ತೆಗಳು ಸುಮಾರು ದಿನಗಳಿಂದ ಗುಂಡಿ ಬಿದ್ದು ಹಾಗೆಯೇ ಇವೆ. ಆ ರಸ್ತೆಗಳಿಗೆ ತೇಪೆ ಹಾಕುವುದನ್ನು ಬಿಟ್ಟು, ಚೆನ್ನಾಗಿರೋ ರಸ್ತೆಗಳನ್ನು ಟ್ಯಾಪಿಂಗ್ ಮಾಡಲು ಹೊರಟಿದ್ದಾರೆ. ವೈಟ್ ಟ್ಯಾಪಿಂಗ್ ಮಾಡುವ ಅಗತ್ಯವೇನಿತ್ತು? ಒಂದೊಂದ್ ಕಡೆ ವೈಟ್ಟ್ಯಾಪಿಂಗ್ ಮಾಡಿದ್ದಾರೆ. ಚೆನ್ನಾಗಿದೆ ರಸ್ತೆ ಎಂದು ವಾಹನಗಳು ಓಡಿಸಿಕೊಂಡು ಹೋಗಿ ಹಲವು ಕಡೆ ಅಪಘಾತ ಸಂಭವಿಸಿ ಸಾವು-ನೋವು ಆಗಿದೆ. ಇದೊಂದ್ ರೀತಿ ಮೈಮೇಲಿನ ಬಟ್ಟೆ ಹರಿದಿದೆ. ಹೊಸ ಬಟ್ಟೆ ಒಲಿಸಿಕೊಂಡಂತಾಗಿದೆ. ನಮ್ಮ ಬಿಬಿಎಂಪಿ ಎಂಜಿನಿಯರ್ಗಳು ರಸ್ತೆ ಗುಂಡಿ ಬಿದ್ದಿದೆ ಎಂದರೆ ಯಾರೂ ನೋಡಲು ಹೋಗುವುದಿಲ್ಲ. ಆದರೆ ಎಲ್ಲಾದರೂ ಕಟ್ಟಡ ಕಟ್ಟುತ್ತಿದ್ದರೆ, ಮರಳು ಗುಡ್ಡೆ ಬಿದ್ದಿರುತ್ತೆ, ಸಿಮೆಂಟ್, ಕಲ್ಲು ರಾಶಿ ಹಾಕಿದ್ದರೆ ಅಲ್ಲಿ ಕಲೆಕ್ಷನ್ಗೆ ಹೋಗ್ತಾರೆ. ಏನಿದು ಅವ್ಯವಸ್ಥೆ? ಎಂದು ಒಂದು ಸಮನೆ ರೇಗಿದರು.
ಹಲವು ರಸ್ತೆಗಳನ್ನು ಉಲ್ಲೇಖಿಸಿದ ಅವರು, ನಾನು ಇದೇ ಬೆಂಗಳೂರಲ್ಲಿ ಇದ್ದೀನಿ. ಸುಮಾರು 10 ಸಾವಿರ ಮದುವೆ ಫಂಕ್ಷನ್ ಅಟೆಂಡ್ ಆಗಿದ್ದೀನಿ. ಎಷ್ಟು ರಸ್ತೆಗಳ ಮೂಲಕ ಹಾದುಹೋಗಿರಬಹುದು, ಆ ರಸ್ತೆಗಳ ಹೇಗಿರಬಹುದು ಅನ್ನೋದನ್ನು ನಾನು ಗ್ರಹಿಸಿದ್ದೀನಿ ಅಂತ ಹಲವು ರಸ್ತೆಗಳ ಹೆಸರು ಉಲ್ಲೇಖಿಸಿದರು. ಅವ್ ಹೆಂಗಿದ್ದಾವೋ ಹಂಗೆ ಇವೆ. ಹಾಳಾಗಿರೋ ರಸ್ತೆ ದುರಸ್ತಿ ಮಾಡ್ತಿಲ್ಲ. ಚೆನ್ನಾಗಿ ಇರೋ ರಸ್ತೆ ಟ್ಯಾಪಿಂಗ್ ಮಾಡ್ತಾವ್ರೇ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ವ್ಯಾಪ್ತಿಯಲ್ಲಿ 14 ಸಾವಿರ ಕಿ.ಮೀ. ಉದ್ದದ ರಸ್ತೆ ಸಂಪರ್ಕವಿದೆ. 2 ಸಾವಿರ ಕಿ.ಮೀ. ಆರ್ಟಿರಿಯಲ್, ಸಬ್ಆರ್ಟಿರಿಯಲ್ ಪ್ರಮುಖ ರಸ್ತೆಗಳಿವೆ. 1200 ಕಿ.ಮೀ. ಉದ್ದದ ವಾರ್ಡ್ ರಸ್ತೆಗಳಿವೆ. 2017ರ ಅಕ್ಟೋಬರ್ ತಿಂಗಳಲ್ಲಿ ಸತತ ಮಳೆಯಿಂದ ಭಾರೀ ಅನಾಹುತ ಉಂಟಾಗಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ರಸ್ತೆಗಳೆಲ್ಲಾ ಹಾಳಾಗಿದ್ದು, ಅವುಗಳನ್ನು ನಾವು ದುರಸ್ತಿ ಮಾಡುತ್ತಿದ್ದೇವೆ. ಯಾರು ಈ ರಸ್ತೆಗಳ ಕಾಮಗಾರಿ ಮಾಡಿದ ಗುತ್ತಿಗೆದಾರರಿಂದ ದುರಸ್ತಿ ಮಾಡಿಸುತ್ತಿದ್ದೇವೆ. ವೈಟ್ಟ್ಯಾಪಿಂಗ್ ಮಾಡುತ್ತಿರುವುದು ಶಾಶ್ವತ ಪರಿಹಾರಕ್ಕೆ ಎಂದು ಸಮಜಾಯಿಷಿ ನೀಡಿದರು.