ಮಧುರೈ: ಚಿತ್ರರಂಗದ ನಂತರ ಈಗ ರಾಜಕೀಯಕ್ಕೆ ರಂಗಕ್ಕೆ ಪಾದರ್ಪಣೆ ಮಾಡಿರುವ ಕಮಲ್ ಹಾಸನ್, ಕಾವೇರಿ ಜಲ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸುವ ಪ್ರಸ್ತಾವ ಇಟ್ಟಿದ್ದಾರೆ.
ಮಧುರೈನಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಪಕ್ಷದ ಹೆಸರನ್ನು ಮಕ್ಕಳ್ ನೀಧಿ ಮಯ್ಯಂ ಎಂದು ಘೋಷಿಸಿ, ಚಿಹ್ನೆಯನ್ನು ಬಿಡುಗಡೆ ಮಾಡಿದ ಕಮಲ್ ಹಾಸನ್ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು.
ಕಾವೇರಿ ನೀರು ತಂದುಕೊಡುತ್ತೀರಾ ಎಂದು ಹಲವಾರು ಮಂದಿ ನನ್ನನ್ನು ಕೇಳುತ್ತಿದ್ದಾರೆ. ಆದರೆ ಇಷ್ಟು ವರ್ಷ ಯಾರೂ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಲಿಲ್ಲ. ಈ ರೀತಿ ಆಗಿದಿದ್ದರೆ ನಮಗೆ ಈ ಹಿಂದೆಯೇ ಪಾಲು ಸಿಗುತ್ತಿತ್ತು. ನಾನು ರಕ್ತ ಕೊಡುತ್ತೇನೆ. ಅಂದರೆ ಬೆಂಗಳೂರು ಜನರಿಂದ ರಕ್ತದಾನ ಮಾಡಿಸುತ್ತೇನೆ. ನೀರಿಗಾಗಿ ಆಸ್ತಿಪಾಸ್ತಿ, ಪ್ರಾಣ ಹಾನಿ ಮಾಡುವುದು ಬೇಡ. ಹಿಂಸಾಚಾರ ನಮಗೆ ಬೇಡವೇ ಬೇಡ ಎಂದರು.
ನಮ್ಮ ಪಕ್ಷದ ಚಿಹ್ನೆ ನೋಡಿ. ಆರು ಕೈಗಳು ಒಂದಕ್ಕೊಂಡು ಜೋಡಿಸಿದೆ. ಅಂದರೆ ಇದು ದಕ್ಷಿಣ ಭಾರತದ ಆರು ರಾಜ್ಯಗಳು. ಮಧ್ಯದಲ್ಲಿ ಇರುವ ನಕ್ಷತ್ರ ಜನರು ಎಂದು ಕಮಲ್ ಹಾಸನ್ ತಿಳಿಸಿದರು.
ಈ ವಯಸ್ಸಿನಲ್ಲಿ ರಾಜಕೀಯ ಪಕ್ಷ ಕಟ್ಟುವ ನನ್ನನ್ನು ಎಲ್ಲರೂ ಗೇಲಿ ಮಾಡಿದ್ದಾರೆ. ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿರುವುದು ನೀವು (ಜನರು). ನಿಮಗಾಗಿ ಏನಾದರೂ ತಿರುಗಿ ಕೊಡಲು, ನಿಮ್ಮ ಋಣ ತೀರಿಸಿಕೊಳ್ಳಲು ಈ ವೇದಿಕೆ ಆರಿಸಿಕೊಂಡಿದ್ದೇನೆ ಎಂದು ಕಮಲ್ ಹೇಳಿದರು.
ಶಾಲೆಗಳನ್ನು ಸುಸೂತ್ರವಾಗಿ ನಡೆಸಬೇಕಾಗಿದ್ದ ಸರಕಾರಗಳು ಈಗ ಎಲ್ಲಿವೆ. ಶಾಲೆಗಳನ್ನು ನಡೆಸಬೇಕಾದ ಸರಕಾರಗಳು ಈಗ ಮದ್ಯದ ಅಂಗಡಿಗಳ ಹಿಂದೆ ಬಿದ್ದಿವೆ. ನಮ್ಮ ದೇಶ ಎತ್ತ ಸಾಗುತ್ತಿದೆ. ಚಿಕ್ಕಮಕ್ಕಳ ಕೈಗೇ ಈಗ ಮದ್ಯದ ಬಾಟಲಿ ಸಿಗುತ್ತಿದೆ. ಈ ಬಗ್ಗೆ ನಾವು ಚಿಂತನೆ ನಡೆಸಬೇಕು ಎಂದು ಅವರು ಹೇಳಿದರು.
ಈಗ ಹೊಸದಾಗಿ ಹೆಜ್ಜೆ ಇಡಲಾಗಿದೆ. ಇನ್ನು ನಮ್ಮ ಮುಂದೆ ಸವೆಯಬೇಕಾದ ದೂರ ಸಾಕಷ್ಟು ಇದೆ. ಸರಿದಾರಿಯಲ್ಲಿ ನಡೆದು ಉತ್ತಮ ಭವಿಷ್ಯ ರೂಪಿಸೋಣ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಕಮಲ್ ಹಾಸನ್ ತಿಳಿಸಿದರು.