ಕುಂದಾಪುರ, ಫೆ.20- ಗರ್ಭಿಣಿ ಮೇಲೆ ಅತ್ಯಾಚಾರ ಎಸಗಿ, ಭೀಕರವಾಗಿ ಕೊಲಗೈದ ಅಪರಾಧಿ ಪ್ರಶಾಂತ್ ಮೊಗವೀರನಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಇಂದು ಮರಣದಂಡನೆ ತೀರ್ಪು ವಿಧಿಸಿದೆ.
ಗರ್ಭಿಣಿ ಮೇಲೆ ಅತ್ಯಾಚಾರಕ್ಕೆ 10 ವರ್ಷ, ಕಳ್ಳತನಕ್ಕೆ 10, ಅಪಹರಣ ಯತ್ನಕ್ಕೆ 4, ಮನೆಗೆ ಅಕ್ರಮ ಪ್ರವೇಶಕ್ಕೆ 1 ವರ್ಷ, ಇದಲ್ಲದೆ ಮಹಿಳೆ ಹಾಗೂ ಗರ್ಭದಲ್ಲಿದ್ದ ಭ್ರೂಣಹತ್ಯೆ ಪ್ರಕರಣದಲ್ಲಿ ಆಪಾದಿತನಿಗೆ ಗಲ್ಲು ಶಿಕ್ಷೆ ವಿಧಿಸಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ತೀರ್ಪು ನೀಡಿದ್ದಾರೆ.
ಇಂದು ಮಹತ್ವದ ತೀರ್ಪು ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ನೂರಾರು ಮಂದಿ ಜಮಾಯಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಮೂರು ವರ್ಷಗಳ ಹಿಂದೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪಡುಗೋಪಾಡಿಯ ಗರ್ಭಿಣಿ ಮೇಲಿನ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಫೆ.14ರಂದು ಆರೋಪಿ ಪ್ರಸಾಂತ್ ಮೊಗವೀರನನ್ನು ದೋಷಿ ಎಂದು ಪರಿಗಣಿಸಿತ್ತು.
ಕೋಟೇಶ್ವರ ಸಮೀಪದ ಗೋಪಾಡಿ ಗ್ರಾಮದ ಪಡುಗೋಪಾಡಿಯ ಕಡಲ ಕಿನಾರೆ ಬಳಿ ಏಳು ತಿಂಗಳ ಗರ್ಭಿಣಿ ಇಂದಿರಾ ಅವರ ಮೇಲೆ 11ನೆ ಏಪ್ರಿಲ್ 2015ರಂದು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಇಂದಿರಾ ಅವರು ಪುಟ್ಟ ಮಗುವಿನೊಂದಿಗೆ ಮನೆಯಲ್ಲಿದ್ದರು. ಆಗ ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಪ್ರಶಾಂತ್ ಈ ಭೀಕರ ಕೃತ್ಯ ಎಸಗಿದ್ದ.
ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಮೈಮೇಲಿದ್ದ ಆಭರಣಗಳನ್ನು ದೋಚಿ ಪರಾರಿಯಾಗಿದ್ದ.