ನಾವು ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಅದರ ಅಗತ್ಯವೂ ನಮಗಿಲ್ಲ: ಸಂಸದೆ ಶೋಭಾ ಕರಂದ್ಲಾಜೆ

 

ಬೆಂಗಳೂರು,ಏ.30-ನಾವು ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಅದರ ಅಗತ್ಯವೂ ನಮಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುವುದನ್ನು ನಿಲ್ಲಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.ಒಂದು ವೇಳೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರೆ ಏಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಚುನಾವಣೆಗೂ ಮುನ್ನವೇ ಸೋಲು ಒಪ್ಪಿಕೊಂಡಿರುವ ಸಿದ್ದರಾಮಯ್ಯ ವಿನಾಕಾರಣ ನಮ್ಮ ಪಕ್ಷವನ್ನು ಗುರಿಯಾಗಿಟ್ಟುಕೊಂಡು ಟೀಕೆ ಮಾಡುತ್ತಿದ್ದಾರೆ. ಜೆಡಿಎಸ್ ಜೊತೆ ನೀವು ಬಿಬಿಎಂಪಿಯಲ್ಲಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದೀರಿ ಎಂದ ಅವರು, ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮೊದಲು ನಿಲ್ಲಿಸಬೇಕು ಇಲ್ಲದಿದ್ದರೆ ನಾವು ಕೂಡ ತಕ್ಕಪಾಠ ಕಲಿಸುತ್ತೇವೆ ಎಂದು ಶೋಭಾ ಎಚ್ಚರಿಸಿದರು.

ಬಿಜೆಪಿ ಚುನಾವಣೆಗೂ ಮುನ್ನವೇ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ರಾಜ್ಯದ 224 ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಏ.13ರಂದು ಅಮಿತ್ ಷಾ ಅವರು ಬೆಳಗಾವಿಯಲ್ಲಿದ್ದರು. ಕುಮಾರಸ್ವಾಮಿ ಕೂಡ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದೆ ಎಂದು ಹೇಳಿದ್ದಾರೆ. ನೀವು ಯಾವ ಆಧಾರದ ಮೇಲೆ ಈ ಆರೋಪ ಮಾಡಿದ್ದೀರಿ ಎಂದು ಬಹಿರಂಗಪಡಿಸುವಂತೆ ಒತ್ತಾಯಿಸಿದರು.
ಫಲಿತಾಂಶದಲ್ಲಿ ಸೋಲು ಉಂಟಾಗಬಹುದೆಂಬ ಭೀತಿಯಿಂದ ಸಿದ್ದರಾಮಯ್ಯನವರು ವಿಲ ವಿಲ ಒದ್ದಾಡುತ್ತಿದ್ದಾರೆ. ಹೀಗಾಗಿ ಪ್ರತಿಪಕ್ಷಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಏನೇ ಸರ್ಕಸ್ ನಡೆಸಿದರೂ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ