ಬೆಂಗಳೂರು,ಏ.30- ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಟಿವಿ ಮತ್ತು ಮುದ್ರಣ ಮಾಧ್ಯಮಗಳಿಗೆ ನೀಡಿರುವ ಪ್ರಚಾರ ಜಾಹಿರಾತಿನಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತರು ವರದಿ ನೀಡಿದ್ದು , ಇದನ್ನು ಆಧರಿಸಿ ಕೇಂದ್ರ ಚುನಾವಣಾ ಆಯೋಗ ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಿದ್ದ ಸರ್ಕಾರ ಎಂಬ ಹೆಸರಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಕಟಿಸಲಾಗಿರುವ ಜಾಹಿರಾತು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಈ ಜಾಹಿರಾತುಗಳು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡುತ್ತಿವೆ. ಬಿಜೆಪಿ ಪಾರ್ಟಿ ರಾಜ್ಯ ಮಟ್ಟದಲ್ಲಿ ಈ ಜಾಹಿರಾತುಗಳನ್ನು ನೀಡಿದೆ. ಹಾಗಾಗಿ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಗೆ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಜಾಹಿರಾತುಗಳ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಮಂಜುನಾಥ್ ಪ್ರಸಾದ್ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ.
ಜಾಹಿರಾತಿನಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಪ್ರಸ್ತಾಪಿಸಿ ನಿಯಮ ಬಾಹಿರವಾಗಿ ಬಿಜೆಪಿ ನಡೆದುಕೊಂಡಿದೆ. ಸುಳ್ಳು ಪ್ರಚಾರ ಮಾಡಿದ್ದಾಕ್ಕಾಗಿ ಬಿಜೆಪಿ ನಾಯಕರಾದ ಅಮಿತ್ ಷಾ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ ಯಾವ ಸಾಧನೆಗಳು ಹೇಳಿಕೊಳ್ಳುವಂತಿಲ್ಲ. ಜೈಲಿಗೆ ಹೋಗಿಬಂದಿದ್ದು, ನಾಡಿನ ಸಂಪತ್ತನ್ನೇ ಲೂಟಿ ಮಾಡಿದ್ದೇ ಆಗಿದೆ. ಕೇಂದ್ರ ಸರ್ಕಾರದ ಸಾಧನೆ ಕೂಡ ಹೇಳಿಕೊಳ್ಳುವಂತಹುದು ಯಾವುದೂ ಇಲ್ಲ. ಹೀಗಾಗಿ ಆಕ್ಷೇಪಾರ್ಹ ವಿಷಯಗಳನ್ನು ಜಾಹಿರಾತು ಮೂಲಕ ನೀಡಿ ಜನರನ್ನು ಮರಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಕೂಡಲೇ ಚುನಾವಣಾ ಆಯೋಗ ಬಿಜೆಪಿ ವಿರುದ್ಧ ಕ್ರಮ ಜರುಗಿಸಬೇಕೆಂದು ಉಗ್ರಪ್ಪ ಆಗ್ರಹಿಸಿದರು.
ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಬಿಜೆಪಿ ನಾಯಕರಿಗೆ ಬುದ್ದಿ ಭ್ರಮಣೆಯಾಗಿದೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.