ಚುನಾವಣೆ ಮುಗಿದ ಬಳಿಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು, ಅಡ್ವಾಣಿಯಂತೇ ಮೂಲೆ ಗುಂಪುಮಾಡಲಾಗುತ್ತದೆ: ಗೃಹ ಸಚಿವ ರಾಮಲಿಂಗಾರೆಡ್ಡಿ

 

ಬೆಂಗಳೂರು,ಏ.30- ವಿಧಾನಸಭೆ ಚುನಾವಣೆ ಮುಗಿದ ಬಳಿಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು, ಅಡ್ವಾಣಿ ಅವರ ರೀತಿಯಲ್ಲೇ ಮೂಲೆ ಗುಂಪುಮಾಡಲಾಗುತ್ತದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ನಗರದ ಪ್ರೆಸ್‍ಕ್ಲಬ್‍ನಲ್ಲಿಂದು ಸಂವಾದದಲ್ಲಿ ಭಾಗವಹಿಸಿ ಮಾತನಾಡಿದವರು, ಈಗಾಗಾಲೇ ಯಡಿಯೂರಪ್ಪ ಅವರನ್ನು ಬಿಟ್ಟು ಪ್ರಧಾನಿ ಮೋದಿ ರ್ಯಾಲಿ ಮಾಡಲು ಹೊರಟ್ಟಿದ್ದಾರೆ. ಬರೀ ನಮಸ್ಕಾರ ಮಾಡುವುದಷ್ಟೇ ಬಿಎಸ್‍ವೈ ಕೆಲಸವಾಗಿದೆ. ಚುನಾವಣೆ ಮುಗಿದ ಬಳಿಕ ಅವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ . ಬಿಜೆಪಿ ಒಡೆದು ಎರಡು ಹೋಳಾಗುತ್ತದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಕಾಂಗ್ರೆಸ್ ಗೆಲುವು ನಮಗೆ ಮುಖ್ಯ. ಎಲ್ಲ ಕಡೆ ಬಲಿಷ್ಠ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ. ಇತರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂಬುದು ಶುದ್ಧ ಸುಳ್ಳು. ಎಲ್ಲ ಕಡೆ ಪ್ರಬಲವಾದ ಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ ಹೆಚ್ಚುಸ್ಥಾನವನ್ನು ಬೆಂಗಳೂರಿನಲ್ಲಿ ಗೆಲ್ಲಲಿದೆ ಎಂದರು.

ಜಯನಗರದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರಿ ಸೌಮ್ಯ ಗೆದ್ದೇ ಗೆಲ್ಲುತ್ತಾಳೆ. ಈಗಾಗಲೇ ನಾಲ್ಕೈದು ತಿಂಗಳಿನಿಂದ ಅಲ್ಲಿ ಅವರು ಕೆಲಸ ಮಾಡಿದ್ದಾರೆ. ಜಯನಗರ ನನ್ನ ಹಳೆಯ ಕ್ಷೇತ್ರ. ಅಲ್ಲಿ ಕಾಂಗ್ರೆಸ್ ಸದೃಢವಾಗಿದೆ ಎಂದು ಹೇಳಿದರು.
ಬಿಜೆಪಿಯವರಿಗೆ ಕರ್ನಾಟಕದಲ್ಲಿ ಸೋಲಿನ ಭಯ ಶುರುವಾಗಿದೆ. ಈ ಮೊದಲು ಪ್ರಧಾನಿ 15 ದಿನ ರಾಜ್ಯದಲ್ಲಿ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಲಾಗಿತ್ತು. ಈಗ ಅದು 5ದಿನಕ್ಕೆ ಇಳಿದಿದೆ. ಅವರಿಗೆ ಗೆಲ್ಲುವ ವಿಶ್ವಾಸ ಕುಗ್ಗಿದೆ ಎಂದರು.

ಬಿಜೆಪಿ ಸತ್ತ ವ್ಯಕ್ತಿಗಳಿಗೂ ಪಕ್ಷದ ಸದಸ್ಯತ್ವ ಕೊಡುವ ಮಟ್ಟಕ್ಕೂ ಇಳಿದಿದೆ. ಕರಾವಳಿ ಭಾಗದಲ್ಲಿ ಪರೇಶ್ ಮೆಸ್ತ ಬಸೀರ್ ಕೇಸ್‍ಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವ ಯತ್ನ ನಡೆಸಿದ್ದು, ಟಿಪ್ಪು, ಹನುಮಾನ್ ಜಯಂತಿ ವಿಚಾರವಾಗಿಯೂ ಕೋಮು ಭಾವನೆ ಕೆರಳಿಸಿ ರಾಜಕೀಯ ಮಾಡುವ ಪ್ರಯತ್ನ ಮಾಡಿದರು. ಅದು ಯಾವುದೂ ಯಶಸ್ವಿಯಾಗಲಿಲ್ಲ.

ಹಿಂದೂ ಸಂಸ್ಕøತಿಯನ್ನು ಬಿಜೆಪಿ ಗುತ್ತಿಗೆ ಪಡೆದಿಲ್ಲ. ಕಾಂಗ್ರೆಸ್‍ಗೆ ಹಿಂದೂ ಧರ್ಮದ ಬಗ್ಗೆ ಬಿಜೆಪಿಗಿಂತ ಹೆಚ್ಚು ಅಭಿಮಾನವಿದೆ. ಅದರಲ್ಲಿ ರಾಜಕೀಯ ಮಾಡುವುದಿಲ್ಲ. ದೇವಸ್ಥಾನ ಕಟ್ಟುವವರು ನಾವು, ಅದನ್ನು ರಾಜಕೀಯ ಮಾಡಿ ಹೈಜಾಕ್ ಮಾಡುವವರು ಬಿಜೆಪಿಯವರು. ಒಂದೆಡೆ ಗೋಹತ್ಯೆ ನಿಷೇಧವಾಗಬೇಕು ಎನ್ನುತ್ತಾರೆ. ಆದರೆ ಕೇಂದ್ರ ಸರ್ಕಾರವೇ ಗೋ ಮಾಂಸ ರಫ್ತಿಗೆ ಅನುಮತಿ ನೀಡಿದೆ. ಮೋದಿ ಸರ್ಕಾರದಲ್ಲಿ ಭಾರತ ಜಗತ್ತಿನಲ್ಲೇ ಅತಿಹೆಚ್ಚು ಗೋಮಾಂಸ ರಫ್ತು ಮಾಡುವ 2ನೇ ದೇಶವಾಗಿದೆ. ಇವರಿಗೆ ಗೋವಿನ ಬಗ್ಗೆ ನಿಜವಾದ ಕಾಳಜಿ ಇಲ್ಲ. ಮದಕರಿ ನಾಯಕನ ಜಯಂತಿ ಮಾಡುತ್ತೇವೆ ಎಂದು ಹೇಳುತ್ತಾರೆ.

ಆದರೆ ಟಿಪ್ಪು ಜಯಂತಿ ವಿಷಯದಲ್ಲಿ ದ್ವಂಧ್ವ ನಿಲುವನ್ನು ತೋರಿಸಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಯಡಿಯೂರಪ್ಪ ಟಿಪ್ಪು ಪೇಟಾ ಧರಿಸಿದ್ದರು. ಶೋಭಾ ಕರಂದ್ಲಾಜೆ ಅದನ್ನು ನೋಡಿ ಖುಷಿಪಟ್ಟಿದ್ದರು. ಈಗ ವಿರೋಧ ಮಾಡುತ್ತಿದ್ದಾರೆ.

ಪಿಎಫ್‍ಐ ಭಯೋತ್ಪಾದನೆ ಸಂಘಟನೆಗಳನ್ನು ಮಟ್ಟ ಹಾಕಲು ಕ್ರಮ ಕೈಗೊಂಡಿದ್ದೇವೆ. ರಾಜಕೀಯ ನಾಯಕರ ಕುಮ್ಮಕ್ಕಿನಿಂದ ರಾಜಕೀಯ ಪ್ರೇರಿತ ಕೊಲೆಗಳಾಗಿವೆ. ದಕ್ಷಿಣ ಕನ್ನಡ ಕೋಮುವಾದ ಫ್ಯಾಕ್ಟರಿಯಾಗಿತ್ತು. ನಮ್ಮ ಸರ್ಕಾರ ಅದನ್ನು ಮುಚ್ಚಿಸಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ