ಮಂಗಳೂರು, ಏ.30-ದಕ್ಷಿಣ ಕನ್ನಡ ಜಿಲ್ಲೆಯ ವಿಶ್ವವಿಖ್ಯಾತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು 95.9 ಕೋಟಿ ರೂ.ಗಳ ವಾರ್ಷಿಕ ಆದಾಯದೊಂದಿಗೆ ರಾಜ್ಯದ ಅತ್ಯಂತ ಶ್ರೀಮಂತ ಮುಜರಾಯಿ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಮತ್ತೆ ಪಾತ್ರವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಈ ದೇಗುಲದ ವಾರ್ಷಿಕ ವರಮಾನ 89 ಕೋಟಿ ರೂ.ಗಳಷ್ಟಿತ್ತು.
ದೇವಸ್ಥಾನದ ಆದಾಯದಲ್ಲಿ, ವಿವಿಧ ಸೇವೆಗಳು ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ ಲಭಿಸಿರುವ ವರಮಾನವೇ ಅತಿ ಹೆಚ್ಚು. ಈ ಮಂದಿರದಲ್ಲಿ ಇಂಥ ವಿಶೇಷ ಪೂಜೆಗಳನ್ನು ನೆರವೇರಿಸಲು ನೂರಾರು ಭಕ್ತರು ದೀರ್ಘ ಕಾಲದಿಂದಲೂ ಕಾಯಬೇಕಾಗುತ್ತದೆ. ಪಟ್ಟಿಯಲ್ಲಿರುವ ಹೆಸರುಗಳ ಆದ್ಯತೆ ಮೇಲೆ ವಿವಿಧ ಸೇವೆಗಳನ್ನು ನೆರವೇರಿಸಲಾಗುತ್ತದೆ. ಈ ವರ್ಷ ವಿಶೇಷವಾಗಿ ಇಂಥ ಸೇವೆಗಳಿಂದಲೇ 40.5 ಕೋಟಿ ರೂ.ಗಳ ಆದಾಯ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸಂದಾಯವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ರವೀಂದ್ರ ತಿಳಿಸಿದ್ದಾರೆ.
ದೇಗುಲದ ಎರಡನೇ ಆದಾಯದ ಮೂಲ ಹುಂಡಿ ಸಂಗ್ರಹ. ಈ ವರ್ಷ 20.5 ಕೋಟಿ ರೂ.ಗಳನ್ನು ಭಕ್ತರು ಕಾಣಿಕೆ ರೂಪದಲ್ಲಿ ಸಂದಾಯ ಮಾಡಿದ್ದಾರೆ. 19.4 ಕೋಟಿ ರೂ.ಗಳು ಬ್ಯಾಂಕ್ ಬಡ್ಡಿಯಿಂದ ಲಭಿಸಿದೆ ಎಂದು ಅವರು ವಿವರಿಸಿದ್ದಾರೆ. ಇತರ ಆದಾಯದ ಮೂಲಗಳೆಂದರೆ ಕೃಷಿ (14.7 ಕೋಟಿ ರೂ.ಗಳು), ಬಾಡಿಗೆ (2.5 ಕೋಟಿ ರೂ.ಗಳು), ಸಾಮಾನ್ಯ ಪೂಜೆ (2.1 ಕೋಟಿ ರೂ.ಗಳು), ಸಭಾಂಗಣಗಳ ಬಾಡಿಗೆ (2.8 ಕೋಟಿ ರೂ.ಗಳು) ಹಾಗೂ ಇತರೆ (7.9 ಕೋಟಿ ರೂ.ಗಳು).
ಭಕ್ತರು ದೇವಾಲಯದ ಹುಂಡಿಗಳಿಗೆ ಅಮಾನ್ಯೀಕರಣ ನೋಟುಗಳನ್ನು ಕಾಣಿಕೆ ರೂಪದಲ್ಲಿ ಹಾಕುವುದನ್ನು ಮುಂದುವರಿಸಿದ್ದಾರೆ. ವಿದೇಶಿ ಆಸ್ತಿಕರೂ ಡಾಲರ್ಗಳ ರೂಪದಲ್ಲಿ ಹಣ ನೀಡುತ್ತಿದ್ಧಾರೆ. ಅಮೆರಿಕ ಮತ್ತು ಇತರ ಶ್ರೀಮಂತ ದೇಶಗಳಿಂದಲೂ ಹಣ ಸಂದಾಯವಾಗುತ್ತಿದೆ.
ಖ್ಯಾತ ಕ್ರಿಕೆಟ್ ತಾರೆಯರಾದ ಸಚಿನ್ ತೆಂಡೂಲ್ಕರ್, ಜಾವಗಲ್ ಶ್ರೀನಾಥ್, ರವಿ ಶಾಸ್ತ್ರಿ, ವೆಂಕಟೇಶ್ ಪ್ರಸಾದ್, ಸಿನಿಮಾ ರಂಗದ ಖ್ಯಾತನಾಮರಾದ ಅಮಿತಾಭ್ ಬಚ್ಚನ್, ಶಿಲ್ಪಾ ಶಟ್ಟಿ ಮತ್ತು ಜೂಹಿ ಚಾವ್ಲಾ ಈ ದೇವಸ್ಥಾನದ ಭಕ್ತರು.