ನಂಜನಗೂಡು, ಏ.28- ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರರವರಿಗೆ ಟಿಕೆಟ್ ನಿರಾಕರಿಸಿರುವ ಬಿಜೆಪಿ ವರಿಷ್ಠರ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ವಿಜಯೇಂದ್ರ ಅಭಿಮಾನಿ ಬಳಗದ ಮುಖಂಡರು ನಂಜನಗೂಡು ಮತ್ತು ವರುಣಾ ಕ್ಷೇತ್ರಗಳಲ್ಲಿ ನೋಟಾ ಮತ ಚಲಾಯಿಸಲು ತೀರ್ಮಾನಿಸಿದ್ದಾರೆ.
ಊಟಿ ಹೆದ್ದಾರಿಯ ಕಬ್ಬಳ್ಳಿ ಹಾಸ್ಟೆಲ್ ಆವರಣದಲ್ಲಿ ನೂರಾರು ಮಂದಿ ವಿಜಯೇಂದ್ರ ಅಭಿಮಾನಿ ಬಳಗದ ಪ್ರಮುಖರು ಬಹಿರಂಗ ಸಭೆ ಸೇರಿ ಈ ನಿರ್ಧಾರ ಕೈ ಗೊಂಡರು.
ವಕೀಲರ ಸಂಘದ ಉಪಾಧ್ಯಕ್ಷ ಅಂಬಳೆ ಎ.ಸಿ.ಪ್ರಕಾಶ್, ಸಿಂಧುವಳ್ಳಿ ಸೋಮಶೇಖರ್, ಮುಳ್ಳೂರು ರೇಚಣ್ಣ, ಕುಮಾರಸ್ವಾಮಿ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಕಾರಾಪುರ ಚಿಕ್ಕ ಲಿಂಗಣ್ಣ,ಮಾತನಾಡಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ವೀರಶೈವರ ಪ್ರಾಬಲ್ಯ ಹತ್ತಿಕ್ಕಲು ಷಡ್ಯಂತರ ನಡೆಯುತ್ತಿದೆ.
ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನಮ್ಮ ಯುವ ಮುಖಂಡರ ಶಕ್ತಿ ಏನೆಂಬುದನ್ನು ಮುಂದಿನ ದಿನಗಳಲ್ಲಿ ತೋರಿಸುವ ಜೊತೆಗೆ ಈ ಎರಡೂ ಕ್ಷೇತ್ರಗಳಲ್ಲಿ ನೋಟಾ ಮತ ಚಲಾಯಿಸಿ ಜನತೆಯ ಅಭಿವ್ಯಕ್ತಿ ಸ್ವಾತಂತ್ಯಕ್ಕೆ ಬೆಲೆ ನೀಡಲಾಗುವುದು ಎಂದರು. ವರಿಷ್ಠರಿಗೆ ಬುದ್ದಿ ಕಲಿಸಲು ಎರಡೂ ಕ್ಷೇತ್ರಗಳಲ್ಲಿ ನೋಟಾ ಮತ ಚಲಾಯಿಸಬೇಕೆಂದು ಮನವಿ ಮಾಡಲು ತೀರ್ಮಾನಿಸಲಾಯಿತು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಂಠ, ದೇಬೂರು ಅಶೋಕ್, ಮಲ್ಲಹಳ್ಳಿ ಮಹೇಂದ್ರ, ಕೆರೆಹುಂಡಿ ಚಂದ್ರು, ಹೊಸಕೋಟೆ ಹರ್ಷ, ನಾಗಭೂಷಣ್ ಇಮ್ಮಾವು, ಹಂಡುವಿನಹಳ್ಳಿ ಸಿದ್ದಪ್ಪ ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.