ವುಹಾನ್, ಏ.28-ಭಾರತ-ಚೀನಾ ನಡುವೆ ದೀರ್ಘಕಾಲದಿಂದಲೂ ಬಾಕಿ ಇರುವ ವಿವಾದಗಳ ಇತ್ಯರ್ಥ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಿ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಇಂದು ಮಹತ್ವದ ಚರ್ಚೆ ನಡೆಸಿದ್ದು, ಎರಡೂ ದೇಶಗಳು ಹೊಸ ಮನ್ವಂತರದತ್ತ ದಾಪುಗಾಲು ಹಾಕುತ್ತಿವೆ.
ಚೀನಾದ ಸುಂದರ ತಾಣ ವುಹಾನ್‍ನಲ್ಲಿ ನಿನ್ನೆಯಿಂದ ಔಪಚಾರಿಕ ಮಾತುಕತೆ ಆರಂಭಿಸಿ ವಿಶ್ವದ ಗಮನಸೆಳೆದ ಮೋದಿ ಮತ್ತು ಜಿನ್‍ಪಿಂಗ್ ಇಂದೂ ಕೂಡ ಎರಡನೇ ದಿನದ ನೇರ ಸಮಾಲೋಚನೆ ನಡೆಸಿದರು.
ಉಭಯ ದೇಶಗಳ ವಿದೇಶಾಂಗ ಸಚಿವಾಲಯಗಳ ನಡುವೆ ಪರಸ್ಪರ ಸಂಪರ್ಕ ಬಲವರ್ಧನೆ ಹಾಗೂ ಪರಸ್ಪರ ನಂಬಿಕೆ ಮತ್ತು ವಿಶ್ವಾಸಾರ್ಹತೆ ವೃದ್ದಿಸುವ ನಿಟ್ಟಿನಲ್ಲಿ ಸೇನಾ ಸಂವಹನ ವೃದ್ಧಿಗೆ ಸಹಮತ ಸೂಚಿಸಿದರು.
ಭಯೋತ್ಪಾದನೆ ಏಷ್ಯಾ ಪ್ರಾಂತ್ಯಕ್ಕೆ ದೊಡ್ಡ ಆತಂಕ ಎಂಬುದನ್ನು ಪರಿಗಣಿಸಿದ ಉಭಯ ನಾಯಕರು ಅದರ ನಿಗ್ರಹಕ್ಕಾಗಿ ಪರಸ್ಪರ ಬದ್ಧವಾಗಿರಲು ಒಪ್ಪಿಗೆ ಸೂಚಿಸಿದ್ದಾರೆ.
ಯುದ್ಧ ಮತ್ತು ಉಗ್ರರ ಹಿಂಸಾಚಾರದಿಂದ ತತ್ತರಿಸಿರುವ ಆಫ್ಘಾನಿಸ್ತಾನದಲ್ಲಿ ಜಂಟಿ ಆರ್ಥಿಕ ಯೋಜನೆಗಳನ್ನು ಕೈಗೊಳ್ಳಲು ಎರಡೂ ದೇಶಗಳು ನಿರ್ಧರಿಸಿವೆ.
ಭಾರತ-ಚೀನಾ ನಡುವೆ ಇತ್ಯರ್ಥವಾಗದೇ ಉಳಿದಿರುವ ಮಹತ್ವದ ವಿಷಯಗಳ ಬಗ್ಗೆ ಉಭಯ ನಾಯಕರು ಸಮಾಲೋಚನೆ ನಡೆಸಿದರು. ಗಡಿ ವಿವಾದಗಳ ಮಾತುಕತೆ ಮೂಲಕ ನಿರ್ವಹಣೆ ಮಾಡುವ ಹೊಣೆಯನ್ನು ಉಭಯ ದೇಶಗಳ ವಿಶೇಷ ಪ್ರತಿನಿಧಿಗಳಿಗೆ ನೀಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ವ್ಯಾಪಾರ, ತಂತ್ರಜ್ಞಾನ, ಪ್ರವಾಸೋದ್ಯಮ, ಚಿತ್ರೋದ್ಯಮ ಕ್ಷೇತ್ರಗಳಲ್ಲಿ ಪರಸ್ಪರ ದ್ವಿಪಕ್ಷೀಯ ಬಾಂಧವ್ಯ ಬಲಗೊಳಿಸುವ ನಿಟ್ಟಿನಲ್ಲಿ ಉಭಯ ನಾಯಕರು ಸಮಾಲೋಚನೆ ನಡೆಸಿದರು. ಮಾತುಕತೆ ವೇಳೆ ಯಾವುದೇ ಒಪ್ಪಂದ ಅಥವಾ ಒಡಂಬಡಿಕೆ ಏರ್ಪಡದಿದ್ದರೂ, ಈ ಎಲ್ಲ ಕ್ಷೇತ್ರಗಳಲ್ಲೂ ಪರಸ್ಸರ ಪೂರಕವಾಗಿ ಸಹಕಾರ ನೀಡಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.
ಮೋದಿ-ಜಿನ್‍ಪಿಂಗ್ ನಡುವೆ ನಡೆದ ಮಾತುಕತೆ ವೇಳೆ ಹವಾಮಾನ ಬದಲಾವಣೆ ಸೇರಿದಂತೆ ಇತರ ಪ್ರಮುಖ ಅಂತಾರಾಷ್ಟ್ರೀಯ ವಿಷಯಗಳೂ ಸಹ ಚರ್ಚೆಗೆ ಬಂದವು.
ದಂಡೆ ಮೇಲೆ ನಡಿಗೆ, ದೋಣಿ ವಿಹಾರ
ಇದಕ್ಕೂ ಮುನ್ನ ಉಭಯ ನಾಯಕರು ನಯನ ಮನೋಹರ ವುಹಾನ್‍ನ ಈಸ್ಟ್‍ಲೇಕ್‍ನ ನದಿ ದಂಡೆ ಮೇಲೆ ಬೆಳಗಿನ ವಾಯು ವಿಹಾರದಲ್ಲಿ ಪಾಲ್ಗೊಂಡು ಅನೌಪಚಾರಿಕ ಮಾತುಕತೆ ನಡೆಸಿದರು. ನಂತರ ಇಬ್ಬರು ಚೀನಾದ ಸ್ವಾದಿಷ್ಟ ಚಹಾ ಸೇವಿಸಿ ದೋಣಿ ವಿಹಾರ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.