ಬೆಂಗಳೂರು,ಏ.25- ವಿಧಾನಸಭೆ ಚುನಾವಣೆಗೆ ಮತದಾನ ಸಮೀಪಿಸುತ್ತಿದ್ದಂತೆ ಕಣದಲ್ಲಿರುವ ನಾಲ್ವರು ಅಭ್ಯರ್ಥಿಗಳ ನಾಮಪತ್ರಕ್ಕೆ ಕಂಟಕ ಎದುರಾಗುವ ಸಾಧ್ಯತೆಗಳಿವೆ.
ಕೋಲಾರ ಜಿಲ್ಲೆ ಮುಳಬಾಗಿಲಿನ ಕಾಂಗ್ರೆಸ್ ಅಭ್ಯರ್ಥಿ ಕೊತ್ತನೂರು ಮಂಜುನಾಥ್ ಜಾತಿ ಪ್ರಮಾಣ ಪತ್ರ ಅಸಿಂಧು ಎಂದು ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಾಲಯದ ಈ ತೀರ್ಪಿನಿಂದ ಅವರ ನಾಮಪತ್ರ ತಿರಸ್ಕøತವಾಗುವ ಸಂಭವವಿದೆ.
ಬೆಂಗಳೂರಿನ ರಾಜಾಜಿನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿಬಿಎಂಪಿ ಮಾಜಿ ಮೇಯರ್ ಜಿ.ಪದ್ಮಾವತಿರವರ ಪುತ್ರ 19 ಕೋಟಿ ಸಾಲ ಪಡೆದು ಬ್ಯಾಂಕ್ಗೆ ವಂಚನೆ ಮಾಡಿದ್ದಾರೆ ಎಂದು ಸಂಪತ್ಕುಮಾರ್ ಎಂಬುವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಪದ್ಮಾವತಿ ಅವರಿಗೆ ನೋಟಿಸ್ ನೀಡಿ ಉತ್ತರಿಸುವಂತೆ ಸೂಚಿಸಿದೆ.
ಕೋಲಾರ ಜಿಲ್ಲೆ ಕೆಜಿಎಫ್ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಸದ ಕೆ.ಎಚ್.ಮುನಿಯಪ್ಪರವರ ಪುತ್ರಿ ರೂಪಾ ಎರಡು ಕಡೆ ಮತದಾನದ ಹಕ್ಕು ಹೊಂದಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ವೈ.ಸಂಪಂಗಿ ಅವರ ಪುತ್ರಿ ವೈ.ಎಸ್.ಅಶ್ವಿನಿ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಕೆಜಿಎಫ್ನ ಚುನಾವಣಾಧಿಕಾರಿ ದೂರು ದಾಖಲಿಸಿಕೊಂಡು ನಾಮಪತ್ರ ಪರಿಶೀಲನೆಯನ್ನು ಮುಂದೂಡಿದ್ದಾರೆ.
ಇತ್ತ ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಗೋಡು ತಿಮ್ಮಪ್ಪ ಅವರು ನಾಮಪತ್ರದಲ್ಲಿ ತಮ್ಮ ಕುಟುಂಬದ ಆಸ್ತಿ ವಿವರ ಹಾಗೂ ವಿದ್ಯಾರ್ಹತೆ ಬಗ್ಗೆ ಸುಳ್ಳು ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದಾರೆಂದು ಬಿಜೆಪಿ ಅಭ್ಯರ್ಥಿಯಾಗಿರುವ ಹರತಾಳ್ ಹಾಲಪ್ಪ ಆಯೋಗಕ್ಕೆ ದೂರು ಕೊಟ್ಟಿದ್ದಾರೆ.
ದೂರಿಗೆ ಸಂಬಂಧಿಸಿದಂತೆ ಆಯೋಗ ಕಾಗೋಡು ತಿಮ್ಮಪ್ಪನವರಿಗೆ ದಾಖಲೆ ಸಲ್ಲಿಸುವಂತೆ ಸೂಚಿಸಿದೆ.
ಕೊತ್ತನೂರು ಮಂಜುನಾಥ್ ನಕಲಿ ಜಾತಿ ಪ್ರಮಾಣ ಪತ್ರ:
ಮುಳಬಾಗಿಲು ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಾಸಕ ಜಿ. ಮಂಜುನಾಥ್ರ ಜಾತಿ ಪ್ರಮಾಣ ಪತ್ರದ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠ ಬುಧವಾರ ಮಹತ್ವದ ತೀರ್ಪು ನೀಡಿದೆ.
ಮಂಜುನಾಥ್ ಅವರ ಜಾತಿ ಪ್ರಮಾಣ ಪತ್ರವನ್ನು ಅಸಿಂಧುಗೊಳಿಸಿದೆ. ಹೀಗಾಗಿ ಅವರು ಈ ಚುನಾವಣೆಯಲ್ಲಿ ಸಲ್ಲಿಸಿರುವ ನಾಮಪತ್ರವೂ ತಿರಸ್ಕೃತಗೊಳ್ಳುವ ಸಾಧ್ಯತೆಗಳಿವೆ.
ಚುನಾವಣೆಗೆ ಸ್ಪರ್ಧಿಸುವ ವೇಳೆ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಪರಾಭವಗೊಂಡಿದ್ದ ಜೆಡಿಎಸ್ಅಭ್ಯರ್ಥಿ ಎಂ. ಮುನಿಆಂಜಿನಪ್ಪ 2013ರಲ್ಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದ್ದು, ಕೊತ್ತೂರು ಮಂಜುನಾಥ್ ಅವರ ಜಾತಿ ಪ್ರಮಾಣ ಪತ್ರವನ್ನು ಅಸಿಂಧುಗೊಳಿಸಿದೆ.
ಮಂಜುನಾಥ್ ಅವರು ಬೈರಾಗಿ ಜನಾಂಗದವರು ಎನ್ನಲಾಗಿದೆ. ಹೀಗಾಗಿ, ಸದ್ಯ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಕೊತ್ತೂರು ಮಂಜುನಾಥ್ ಅವರು ಕಾಂಗ್ರೆಸ್ನಿಂದ ಸಲ್ಲಿಸಿರುವ ನಾಮಪತ್ರ ತಿರಸ್ಕೃತವಾಗುವ ಎಲ್ಲ ಸಾಧ್ಯತೆಗಳಿವೆ. ಹಾಗೇನಾದರೂ ಆದಲ್ಲಿ ಕಾಂಗ್ರೆಸ್ ಚುನಾವಣೆಗೂ ಮೊದಲೇ ಒಂದು ಕ್ಷೇತ್ರವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಮುಳಬಾಗಿಲು ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೊತ್ತೂರು ಮಂಜುನಾಥ್, ಕೋಲಾರ ಸಾಮಾನ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿಯೂ ನಾಮಪತ್ರ ಸಲ್ಲಿಸಿದ್ದಾರೆ.
19 ಕೋಟಿ ಬ್ಯಾಂಕ್ಗೆ ವಂಚನೆ ಆರೋಪ:
ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಜಿ. ಪದ್ಮಾವತಿ, ಅವರ ಪುತ್ರ ರಾಷ್ಟ್ರೀಯ ಸಹಕಾರಿ ಸಂಘಕ್ಕೆ 19 ಕೋಟಿ ಸಾಲ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಸಂಪತ್ಕುಮಾರ್ ಎಂಬುವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಬ್ಯಾಂಕ್ನಿಂದ ಸಾಲ ಪಡೆದಿದ್ದ ಪದ್ಮಾವತಿ ಅವರ ಪುತ್ರ ಸಕಾಲಕ್ಕೆ ಸರಿಯಾಗಿ ಸಾಲ ಕಟ್ಟಿರಲಿಲ್ಲ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಅನೇಕ ಬಾರಿ ನೋಟಿಸ್ ನೀಡಿದ್ದರೂ ಸಾಲ ಮಾತ್ರ ಪಾವತಿಯಾಗಿರಲಿಲ್ಲ. ಕೊನೆಗೆ ಬ್ಯಾಂಕ್ ಅಧಿಕಾರಿಗಳು ಪದ್ಮಾವತಿ ಅವರ ಪುತ್ರನನ್ನು ಡಿಫಾಲ್ಟರ್(ಸುಸ್ತಿದಾರ) ಎಂದು ಘೋಷಿಸಿದ್ದರು.
ಮಗನ ಸಾಲಕ್ಕೆ ಸಾಕ್ಷಿಧಾರರಾಗಿ ಪದ್ಮಾವತಿ ಹಾಗೂ ಪತಿ ಸಾಕ್ಷಿಗೆ ಸಹಿ ಹಾಕಿದ್ದರು. ಇತ್ತೀಚೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ಮೇಲೆ ಯಾವುದಾದರೂ ವಂಚನೆ ಪ್ರಕರಣ ಬಾಕಿ ಇದೆಯೇ ಎಂಬ ಕಾಲಂನಲ್ಲಿ ಯಾವುದೂ ಇಲ್ಲ ಎಂದು ಪದ್ಮಾವತಿ ಅರ್ಜಿಯನ್ನು ಭರ್ತಿ ಮಾಡಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಸಂಪತ್ಕುಮಾರ್ ದೂರು ಸಲ್ಲಿಸಿ ಅವರ ನಾಮಪತ್ರವನ್ನು ತಡೆ ಹಿಡಿಯುವಂತೆ ದೂರು ನೀಡಿದ್ದಾರೆ.
ಇದೀಗ ಆಯೋಗದ ಅಧಿಕಾರಿಗಳು ದಾಖಲೆಗಳನ್ನು ಸಲ್ಲಿಸುವಂತೆ ಪದ್ಮಾವತಿಗೆ ಸೂಚಿಸಿದ್ದಾರೆ.
ಎರಡು ಕಡೆ ಮತದಾನದ ಹಕ್ಕು:
ಇನ್ನು ಕೋಲಾರ ಜಿಲ್ಲೆ ಮೀಸಲು ಕ್ಷೇತ್ರವಾದ ಕೆಜಿಎಫ್ನಲ್ಲಿ ಕೇಂದ್ರದ ಮಾಜಿ ಸಚಿವ, ಸಂಸದ ಕೆ.ಎಚ್.ಮುನಿಯಪ್ಪನವರ ಪುತ್ರಿ ರೂಪಾ ಎರಡೆರಡು ಕಡೆ ಮತದಾನದ ಹಕ್ಕು ಹೊಂದಿದ್ದಾರೆ ಎಂದು ವೈ.ಎಸ್ಅಶ್ವಿನಿ ದೂರು ನೀಡಿ, ನಾಮಪತ್ರ ತಿರಸ್ಕರಿಸಬೇಕೆಂದು ಮನವಿ ಮಾಡಿದ್ದಾರೆ.
ಪ್ರಜಾ ಪ್ರತಿನಿಧಿ ಕಾಯ್ದೆ ಪ್ರಕಾರ ಭಾರತೀಯ ಪ್ರಜೆಯೊಬ್ಬ ಎರಡೆರಡು ಕಡೆ ಮತದಾನದ ಹಕ್ಕು ಹೊಂದುವುದು ಶಿಕ್ಷಾರ್ಹ ಅಪರಾಧ. ತಕ್ಷಣವೇ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ಅಶ್ವಿನಿ ಕೋರಿದ್ದಾರೆ.
ದೂರು ದಾಖಲಿಸಿರುವ ಆಯೋಗದ ಅಧಿಕಾರಿಗಳು ನಾಮಪತ್ರ ಪರಿಶೀಲನೆಯನ್ನು ಮುಂದೂಡಿದ್ದಾರೆ ಎಂದು ತಿಳಿದುಬಂದಿದೆ.
ಕಾಗೋಡು ತಿಮ್ಮಪ್ಪ ನಾಮಪತ್ರಕ್ಕೂ ಆಕ್ಷೇಪ:
ಸಾಗರದಿಂದ ಸ್ಪರ್ಧಿಸಿರುವ ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ ಅವರ ನಾಮಪತ್ರದಲ್ಲಿ ಕುಟುಂಬದ ಸ್ವವಿವರ ಹಾಗೂ ಶೈಕ್ಷಣಿಕ ವಿದ್ಯಾರ್ಹತೆಯ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಹರತಾಳ್ ಹಾಲಪ್ಪ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಕಾಗೋಡು ತಿಮ್ಮಪ್ಪ ತಮ್ಮ ಪುತ್ರಿಯ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ಪದವಿ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿರುವುದರಿಂದ ನಾಮಪತ್ರ ತಿರಸ್ಕರಿಸುವಂತೆ ಆಯೊಗಕ್ಕೆ ಹಾಲಪ್ಪ ಮನವಿ ಮಾಡಿಕೊಂಡಿದ್ದಾರೆ.