ತುರುವೇಕೆರೆ, ಏ.25- ತಾಲ್ಲೂಕಿನ ವಿವಿಧ ಕಡೆ ನಿನ್ನೆ ಸಂಜೆ ಭೀಕರ ಮಳೆ, ಗಾಳಿ ಬೀಸಿ ಮರ ಮತ್ತು ವಿದ್ಯುತ್ ಕಂಬಗಳು ಮುರಿದು ಅಪಾರ ನಷ್ಟ ಉಂಟಾಗಿದೆ.
ಪಟ್ಟಣದ ಮಡಿವಾಳರ ಬೀದಿಯಲ್ಲಿ ಅರಳಿ ಮರ ಬಿದ್ದು 2 ವಿದ್ಯುತ್ ಕಂಬಗಳು ಮುರಿದಿವೆ. ಬಾವಿ ಕೆರೆ ಏರಿ ಮತ್ತು ಬ್ರಾಹ್ಮಣರ ಬೀದಿಯಲ್ಲಿ ತೆಂಗಿನ ಮರ ಬಿದ್ದು 3 ಕಂಬಗಳು ಮತ್ತು ಟ್ರಾನ್ಸ್ ಫಾರಂ ನೆಲಕ್ಕೆ ಬಿದ್ದಿದೆ.
ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಮರದ ಕೊಂಬೆ ಬಿದ್ದು ವಿದ್ಯುತ್ ಲೈನ್ ಮುರಿದಿದೆ. ಬಸವೇಶ್ವರ ನಗರದ ವಿವೇಕಾನಂದ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ ತೆಂಗಿನ ಮರ ಬಿದ್ದು ಟ್ರಾನ್ಸ್ಫಾರಂ ಜಖಂಗೊಂಡಿದೆ. ಆರ್ಎಂಸಿ ಹಿಂಭಾಗದ ತೆಂಗಿನ ಮರ ಮುರಿದು ಬಿದ್ದು 2 ವಿದ್ಯುತ್ ಕಂಬಗಳು ಧರೆಗುರುಳಿವೆ.
ಮಾಯಸಂದ್ರ ಹೋಬಳಿಯ ಕಾಮನ ಹಳ್ಳಿಯಲ್ಲಿ 4 ವಿದ್ಯುತ್ ಕಂಬಗಳು ಮುರಿದವೆ. ಹಾಗೆಯೇ ಕಸಬಾದ ಬೇವಿನ ಹಳ್ಳಿ 1 ಮರ, ಪಟ್ಟಣದ ಅನುಕಾರ್ ಸೆಂಟರ್ ಮುಂಭಾಗದ ಮರ ಬುಡ ಮೇಲು ಧರೆಗುರುಳಿದೆ. ಕಾಮನಹಳ್ಳಿ, ಲಿಂಬೇನ ಹಳ್ಳಿ, ಭೆತರಹೊಸಹಳ್ಳಿ, ಯರದೇಹಳ್ಳಿ, ಸೀಗೆಹಳ್ಳಿ, ಅಂಚೀಹಳ್ಳಿ, ಮಲ್ಲೇನಹಳ್ಳಿ ಮತ್ತು ದಬ್ಬೇಘಟ್ಟ ಹೋಬಳಿಯ ಕೆಲ ಕಡೆ ಉತ್ತಮ ಮಳೆಯಾಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ.