ಕೋಲಾರ,ಏ.25- ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ 151 ಅಭ್ಯರ್ಥಿಗಳು 220 ನಾಮಪತ್ರ ಸಲ್ಲಿಸಿದ್ದಾರೆ. ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ 19 ಅಭ್ಯರ್ಥಿಗಳು 37 ನಾಮಪತ್ರ ಸಲ್ಲಿಸಿದ್ದಾರೆ.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ 26 ಅಭ್ಯರ್ಥಿಗಳು 32 ನಾಮಪತ್ರ ಸಲ್ಲಿಸಿದ್ದಾರೆ. ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ 61 ಅಭ್ಯರ್ಥಿಗಳು 76 ನಾಮಪತ್ರ ಸಲ್ಲಿಸಿದ್ದಾರೆ. ಬಂಗಾರಪೇಟೆ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು 21 ನಾಮಪತ್ರ ಸಲ್ಲಿಸಿದ್ದಾರೆ.
ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು 28 ನಾಮಪತ್ರ ಸಲ್ಲಿಸಿದ್ದಾರೆ.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು 26 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಅಂತಿಮ ದಿನದಂದು ಜಿಲ್ಲೆಯಾದ್ಯಂತ ನಾಮಪತ್ರ ಸಲ್ಲಿಕೆಯಾಯಿತು.
ಕೆಜಿಎಫ್ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದ ರಾಮಕ್ಕ ಅವರನ್ನು ಹೊರತುಪಡಿಸಿ ಶ್ರೀನಿವಾಸಪುರ ಶಾಸಕ ರಮೇಶ್‍ಕುಮಾರ್, ಮುಳಬಾಗಿಲು ಶಾಸಕ ಕೊತ್ತನೂರು ಮಂಜುನಾಥ್, ಕೋಲಾರ ಶಾಸಕ ವರ್ತೂರು ಪ್ರಕಾಶ್, ಮಾಲೂರು ಶಾಸಕ ಮಂಜುನಾಥ್ ಗೌಡ, ಬಂಗಾರಪೇಟೆ ಶಾಸಕ ಎನ್.ಎನ್.ನಾರಾಯಣಸ್ವಾಮಿ ಮರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಮಾಜಿ ಶಾಸಕರಾದ ಎ.ನಾಗರಾಜು, ಕೃಷ್ಣಯ್ಯ ಶೆಟ್ಟಿ , ಕೆ.ಶ್ರೀನಿವಾಸ್ ಗೌಡ, ಎಂ.ನಾರಾಯಣಸ್ವಾಮಿ, ವೆಂಕಟಮುನಿಯಪ್ಪ, ಭಕ್ತವತ್ಸಲಂ, ರಾಜೇಂದ್ರನ್, ಅಮರೇಶ್,ಜಿ.ಕೆ.ವೆಂಕಟ್ ಶಿವಮೂರ್ತಿ, ಇವರು ಸಹ ನಾಮಪತ್ರ ಸಲ್ಲಿಸಿದ್ದಾರೆ.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಡಾ.ವೇಣುಗೋಪಾಲ್ ಸಿ ಫಾರಂ ಮತ್ತು ಬಿ ಫಾರಂನೊಂದಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಹಿಂಪಡೆಯುವ ದಿನ ಮುಳಬಾಗಿಲು, ಕೋಲಾರ, ವಿಧಾನಸಭಾ ಕ್ಷೇತ್ರಗಳಲ್ಲಿ ಹೈಡ್ರಾಮಾ ನಡೆಯಲಿದೆ. ಮುಳಬಾಗಿಲು ವಿಧಾನಸಬಾ ಕ್ಷೇತ್ರಕ್ಕೆ ಪಕ್ಷೇತರ ಮತ್ತು ಕಾಂಗ್ರೆಸ್ ಪಕ್ಷದ ವತಿಯಿಂದ ಸಂಸದ ಕೆ.ಎಚ್.ಮುನಿಯಪ್ಪ ಅವರ ಪುತ್ರಿ ನಂದಿನಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಮುಳಬಾಗಿಲು ಶಾಸಕ ಕೊತ್ತನೂರು ಮಂಜುನಾಥ್ ಈ ಮುಂಚೆಯೇ ಕಾಂಗ್ರೆಸ್ ಬಿ ಫಾರಂನೊಂದಿಗೆ ನಾಮಪತ್ರ ಸಲ್ಲಿಸಿದ್ದರು. ಇದ್ದಲ್ಲದೆ ಕ್ಷೇತ್ರವಾರು ಮಂಜುನಾಥ್ ಅವರು ವಾಸ್ತು ಶಾಸ್ತ್ರದಂತೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೊತ್ತನೂರು ಮಂಜುನಾಥ್ ಅವರು ಜಾತಿ ಪ್ರಮಾಣಪತ್ರದ ಗಲಾಟೆ ನ್ಯಾಯಾಲಯದಲ್ಲಿದ್ದು , ಏನಾಗುತ್ತದೆ ಎಂದು ಕಾದುನೋಡಬೇಕಾಗಿದೆ.