ಬಾದಾಮಿ,ಏ.25: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ಶ್ರೀರಾಮುಲು ಸ್ಪರ್ಧೆಯಿಂದಾಗಿ ಬಾದಾಮಿ ಕ್ಷೇತ್ರ ಜಿದ್ದಾಜಿದ್ದಿನ ರಣಕಣವಾಗಿ ಮಾರ್ಪಟ್ಟಿದ್ದು, ಜಾತಿ ರಾಜಕೀಯದ ಅಖಾಡವಾಗಿ ಬದಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಾದಾಮಿ ಕ್ಷೇತ್ರದಿಂದ ಗೆಲ್ಲಿಸಿಯೇ ಸಿದ್ದ ಎಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಮಂದಿ ಕುರುಬ ಸಮುದಾಯದ ಮುಖಂಡರು ಮತ್ತು ಸದಸ್ಯರು ಬಾದಾಮಿಯಲ್ಲಿ ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹತ್ತಾರು ಎತ್ತಿನ ಬಂಡಿಗಳಲ್ಲಿ ಆಗಮಿಸಿರುವ ಸಿದ್ದರಾಮಯ್ಯ ಅಭಿಮಾನಿಗಳು ಗೆಲ್ಲಲೆ ಬೇಕೆಂದು ಬೆವರು ಸುರಿಸುತ್ತಿದ್ದಾರೆ.
ನಮ್ಮ ಸಮುದಾಯಯ ಧೀಮಂತ ನಾಯಕ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಸೋಲಬಾರದು . ಬಾದಾಮಿಯಲ್ಲಿ ಗೆದ್ದು ಮತ್ತೆ ಮುಖ್ಯಮಂತ್ರಿಯಾಗಬೇಕು ಹೀಗಾಗಿ ನಾವು ಸಾವಿರಾರು ಸಂಖ್ಯೆಯಲ್ಲಿ ಬಂದು ಅವರ ಗೆಲುವಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.
ಇನ್ನು ಇದಕ್ಕೆ ಪೂರಕವಾಗಿ ವಾಲ್ಮೀಕಿ ಸಮುದಾಯದ ನಾಯಕ ಸತೀಶ್ ಜಾರಕಿಹೊಳಿ ಸಿಎಂ ನಾಮಪತ್ರ ಸಲ್ಲಿಸುವಾಗಲೇ ಕ್ಷೇತ್ರಕ್ಕೆ ಆಗಮಿಸಿದ್ದು, ತಮ್ಮ ಸಮುದಾಯದ ನಿರ್ಣಾಯಕ ಮತಗಳು ಶ್ರೀರಾಮುಲುವತ್ತ ಹೋಗದಂತೆ ಮಾಡಲು ರಣ ತಂತ್ರ ಆರಂಭಿಸಿದ್ದಾರೆ.
ಇದಕ್ಕೆ ಪುಷ್ಠಿ ನೀಡುವಂತೆ ಮಂಗಳವಾರ ರಾತ್ರಿ 2 ಗಂಟೆಗೂ ಹೆಚ್ಚು ಕಾಲ ಬಾದಾಮಿಯ ಕೃಷ್ಣ ಹೆರಿಟೇಜ್ ನಲ್ಲಿ ಸತೀಶ್ ಜಾರಕಿಹೊಳಿ ಮತ್ತು ಸಿಎಂ ಸಿದ್ದರಾಮಯ್ಯ ಗುಪ್ತ ಮಾತುಕತೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಜೆಡಿಎಸ್ ತಟಸ್ಥ ?
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತೀವ್ರ ಪೈಪೋಟಿ ನೀಡುವ ಹಿನ್ನೆಲೆಯಲ್ಲಿ ಬಾದಾಮಿಯಲ್ಲಿ ರಾಮುಲುಗೆ ಅನುಕೂಲ ಆಗಲು ಜೆಡಿಎಸ್ ಕ್ಷೇತ್ರದಲ್ಲಿ ಒಂದಿಷ್ಟು ಸ್ಪರ್ಧೆಯಲ್ಲಿ ತಟಸ್ಥ ಸ್ಥಿತಿಗೆ ಮುಂದಾಗಿದೆ ಎಂದು ಗುಸು ಗುಸು ಕ್ಷೇತ್ರದಲ್ಲಿ ಸುಳಿದಾಡತೊಡಗಿದೆ. ಜೆಡಿಎಸ್ ಅಭ್ಯರ್ಥಿ ಹನುಮಂತಪ್ಪ ಮಾವಿನಮರದ ನಾಮಪತ್ರ ಸಲ್ಲಿಸಿದ್ದರೂ ಪ್ರಚಾರದಲ್ಲಿ ಹೆಚ್ಚಿನ ತೀವ್ರತೆ ತೋರದೆ ಬಿಜೆಪಿಗೆ ನೆರವಾಗುವ ನಿಟ್ಟಿನಲ್ಲಿ ಸಾಗಬಹುದಾಗಿದೆ ಎಂಬ ಸುದ್ದಿ ಹೆಚ್ಚು ಕೇಳಿಬರತೊಡಗಿದೆ.