ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕಾರಣ!

ಬೆಂಗಳೂರು, ಏ.24- ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕಾರಣ ಎಂಬ ಅಂಶ ಬಹಿರಂಗಗೊಂಡಿದೆ.
ಇಂದು ಮಧ್ಯಾಹ್ನ ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬರೀಶ್ ಅವರು, ದಿನೇಶ್ ಗುಂಡೂರಾವ್ ಅವರು ಕಾಂಗ್ರೆಸ್‍ನಲ್ಲಿ ಅಧ್ಯಕ್ಷರ ನಂತರದ ಜವಾಬ್ದಾರಿ ಹೊಂದಿದ್ದು, ಕಾರ್ಯಾಧ್ಯಕ್ಷರಾಗಿದ್ದಾರೆ. ಒಂದು ತಿಂಗಳ ಹಿಂದೆ ನಮ್ಮ ಮನೆಗೆ ಬಂದಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೇಳಿದರು. ನಾನು ಬೇಡ ಎಂದೆ. ಅದಕ್ಕೆ ಅವರು ನಿಮ್ಮ ನಿರ್ಧಾರ ಸರಿ ಇದೆ. ಈಗ ವಾತಾವರಣ ಸರಿಯಿಲ್ಲ. ನೀವು ನಿಲ್ಲದೇ ಇರುವುದೇ ಸೂಕ್ತ ಎಂದು ಹೇಳಿದರು.
ಅದೇ ದಿನ ನಾನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಧಾರ ತೆಗೆದುಕೊಂಡೆ. ನನಗೆ ದಿನೇಶ್‍ಗುಂಡೂರಾವ್ ಅವರ ಅಪ್ಪ ಗುಂಡೂರಾವ್ ಸ್ನೇಹಿತರು. ದಿನೇಶ್‍ಗುಂಡೂರಾವ್ ನೇರವಾಗಿ ಬಂದು ಮುಖದ ಮೇಲೆ ಹೊಡೆದ ಹಾಗೆ ನಿಮ್ಮ ಕ್ಷೇತ್ರದಲ್ಲಿ ವಾತಾವರಣ ಸರಿಯಲ್ಲ ಎಂದು ಹೇಳುತ್ತಾರೆ ಬೇಸರವಾಗುವುದಿಲ್ಲವೇ? ಎಂದು ಹೇಳಿದರು.
ನನಗೆ ಕಾಂಗ್ರೆಸ್‍ನ ಮೇಲೆ ಅಸಮಾಧಾನ ಇಲ್ಲ. ಯಾರೊಂದಿಗೂ ಅಸಮಾಧಾನ ಪಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಮೊದಲು ನಮ್ಮ ಮನೆಗೆ ಬರುತ್ತಿದ್ದರು. ಅವರಷ್ಟೇ ಅಲ್ಲ, ಪ್ರಧಾನಿಯಾಗಿದ್ದಾಗ ದೇವೇಗೌಡರೂ ಬಂದಿದ್ದರು. ಅದರರ್ಥ ನಾನು ದೊಡ್ಡವನು ಎಂದಲ್ಲ. ಅವರೆಲ್ಲ ನನ್ನ ಮೇಲಿಟ್ಟಿರುವ ಪ್ರೀತಿ ದೊಡ್ಡದು. ಕಾಂಗ್ರೆಸ್‍ನ ಮುಖಂಡರು ಇಂದು ನಾಮಪತ್ರ ಸಲ್ಲಿಸುವ ಕೊನೆ ಕ್ಷಣದವರೆಗೂ ಬಿ ಫಾರಂ ಅನ್ನು ಯಾರಿಗೂ ಕೊಡದೆ ನನಗಾಗಿಯೇ ಕಾಯ್ದಿರಿಸಿದ್ದರು. ಅದು ನನ್ನ ತಾಕತ್ತು ಮತ್ತು ಯೋಗ್ಯತೆ. ಅವರ ಪ್ರೀತಿಗೆ ನಾನು ಚಿರಋಣಿ. ನನಗೆ 71 ವರ್ಷ ವಯಸ್ಸಾಗಿದೆ. ಇನ್ನು ಸಾಕು, ಜನ ತುಂಬಾ ನಿರೀಕ್ಷೆಗಳನ್ನಿಟ್ಟುಕೊಂಡು ಬರುತ್ತಾರೆ. ಅವರ ಕೆಲಸ ಮಾಡಲು ನನಗೆ ಕಷ್ಟವಾಗುತ್ತದೆ. ಓಡಾಡುವುದು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಅಂಬಿ ನಿನಗೆ ವಯಸ್ಸಾಯ್ತು ಎಂಬ ಚಿತ್ರ ತೆಗೆಯುತ್ತಿದ್ದೇವೆ. ಜನರಿಗೆ ಅರ್ಥವಾಗುತ್ತದೆ ಎಂದು ಹೇಳಿದರು.
ರಮ್ಯಾ ಅವರಿಗೆ ಟಿಕೆಟ್ ಕೊಡಬೇಕಿತ್ತು:
ಗಣಿಗ ರವಿಕುಮಾರ್ ಅವರಿಗೆ ಟಿಕೆಟ್ ಕೊಟ್ಟಾಗ ನಾನು ಸಂತೋಷದಿಂದ ಸ್ವಾಗತಿಸಿದ್ದೇನೆ. ರಮ್ಯಾ ಅವರಿಗೆ ಟಿಕೆಟ್ ಕೊಟ್ಟಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು. ಅವರು ಸಂಸದರಾಗಿದ್ದರು. ಆಕೆಯನ್ನು ಕರೆತಂದು ಕಾಂಗ್ರೆಸ್‍ನಿಂದ ಟಿಕೆಟ್ ನೀಡಬಹುದಿತ್ತು ಎಂದು ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದರು.
ನನಗೆ ಮಂಡ್ಯದಲ್ಲಿ ಮಾತ್ರವಲ್ಲ, ರಾಜ್ಯದಲ್ಲೇ ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಬಹುದು. ಶೇ.5ರಷ್ಟು ವೋಟ್ ತಂದುಕೊಡುವ ಶಕ್ತಿ ನನಗಿದೆ. ಆದರೆ ವಯಸ್ಸಿನ ಕಾರಣಕ್ಕಾಗಿ ನಾನು ಸುಮ್ಮನಿದ್ದೇನೆ ಎಂದು ಹೇಳಿದರು.
ಇಂದು ಬೆಳಗ್ಗೆ ಕೂಡ ಪರಮೇಶ್ವರ್ ಅವರು ನನ್ನ ಜೊತೆ ಮಾತನಾಡಿದರು. ಚುನಾವಣೆಯಲ್ಲಿ ನಿಲ್ಲುವಂತೆ ಹೇಳಿದರು. ಅವರ ಅಭಿಮಾನಕ್ಕೆ ಚಿರಋಣಿ. ಸಿದ್ದರಾಮಯ್ಯ ಅವರು ಕೂಡ ನನ್ನೊಂದಿಗೆ ಮಾತನಾಡಿದ್ದಾರೆ ಎಂದು ಹೇಳಿದರು.
ಅಮರಾವತಿ ಚಂದ್ರಶೇಖರ್ ಅವರಿಗೆ ಒಂದು ತಿಂಗಳ ಹಿಂದೆಯೇ ಚುನಾವಣೆಗೆ ನಿಲ್ಲುವಂತೆ ನಾನು ಹೇಳಿದ್ದೆ. ಅವರು ನೀವೇ ನಿಲ್ಲಿ ಎಂದು ಹೇಳಿ ಸ್ಪರ್ಧಿಸಲು ನಿರಾಕರಿಸಿದರು. ಆದರೆ ನಿನ್ನೆ ಬಂದು ಏಕಾಏಕಿ ನನಗೆ ಟಿಕೆಟ್ ಕೊಡಿಸಿ ಎಂದು ಕೇಳಿದರು. ಅದು ಸಾಧ್ಯವಾಗುವುದಿಲ್ಲ. ಟಿಕೆಟ್ ಕೊಡಿಸಿದ ಮೇಲೆ ಪ್ರಚಾರ ಮಾಡಿ ಗೆಲ್ಲಿಸಬೇಕು. ಅವರಿಗೆ ಪ್ರಚಾರ ಮಾಡಲು ಹೋಗುವ ಶಕ್ತಿ ಇದ್ದಿದ್ದರೆ ನಾನೇ ನಿಂತು ಗೆಲ್ಲುತ್ತಿದ್ದೆ. ಅಮರಾವತಿ ಮನೆಯಲ್ಲಿ ನಾನು ಉಳಿದುಕೊಂಡಿದ್ದೇನೆ. ಊಟ ಮಾಡಿದ್ದೇನೆ. ರಾಜ್ಯದ ಜನರ ಅನ್ನದ ಋಣ ನನ್ನ ಮೇಲಿದೆ. ಚುನಾವಣೆಯಿಂದ ರಾಜಕೀಯದಿಂದ ದೂರವಾದರೂ ನನ್ನ ಕೈಲಾದ ಸೇವೆ ಮುಂದುವರೆಸುತ್ತೇನೆ ಎಂದರು.
ಅಂಬರೀಶ್‍ನಿರ್ಧಾರ ನಂತರ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಅಂಬರೀಶ್ ರಾಜಕೀಯ ಬಿಟ್ಟು ಚಿತ್ರರಂಗದಲ್ಲಿ ಮುಂದುವರೆಯಲು ನಿರ್ಧರಿಸಿರುವುದು ನಮಗೆ ಖುಷಿ ನೀಡಿದೆ ಎಂದು ಅಭಿಮಾನಿಗಳು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕಡೆ ಚುನಾವಣೆಗೆ ಸ್ಪರ್ಧಿಸುತ್ತಿರುವುದಕ್ಕೆ ಅಂಬಿ ಬೇಸರ ವ್ಯಕ್ತಪಡಿಸಿದ್ದಾರೆ. ಉತ್ತಮ ಕೆಲಸ ಮಾಡಿರುವ ಸಿದ್ದರಾಮಯ್ಯನವರು ಎರಡೂ ಕಡೆ ಸ್ಪರ್ಧಿಸುವ ಅಗತ್ಯ ಏನಿದೆ? ಸೋಲು-ಗೆಲುವು ಮುಖ್ಯವಲ್ಲ. ಎರಡು ಕಡೆ ಸ್ಪರ್ಧಿಸುವುದು ಬೇಕೇ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ