ಬೆಂಗಳೂರು, ಏ.24- ಕರ್ನಾಟಕದ ಗಮನವನ್ನೇ ತನ್ನತ್ತ ಸೆಳೆದಿರುವ ಬಾಗಲಕೋಟೆ ಜಿಲ್ಲೆ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಂಸದ ಶ್ರೀರಾಮುಲು ಇಂದು ಭರ್ಜರಿ ಶಕ್ತಿ ಪ್ರದರ್ಶಿಸುವ ಮೂಲಕ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ ವಿಶೇಷ ಹೆಲಿಕಾಪ್ಟರ್‍ನಿಂದ ಬಾದಾಮಿಗೆ ಆಗಮಿಸಿದ ಶ್ರೀರಾಮುಲುಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಮತ್ತಿತರ ಪ್ರಮುಖರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ಶ್ರೀರಾಮುಲು ನೇರವಾಗಿ ಬನಶಂಕರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಅವರಿಗೆ ಸ್ಥಳೀಯ ನಾಯಕರಾದ ಎಂ.ಕೆ.ಪಟ್ಟಣಶೆಟ್ಟಿ, ಸಂಸದ ಪಿ.ಸಿ.ಗದ್ದಿಗೌಡರ್, ಶಾಸಕ ಗೋವಿಂದ ಕಾರಜೋಳ, ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಸೇರಿದಂತೆ ಅನೇಕ ನಾಯಕರು ಸಾಥ್ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶಕ್ತಿ ಪ್ರದರ್ಶಿಸಲೇಬೇಕೆಂದು ಹಠಕ್ಕೆ ಬಿದ್ದಿದ್ದ ಬಿಜೆಪಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರನ್ನು ಕರೆತರಲಾಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ, ಡೊಳ್ಳು ಕುಣಿತ, ವೀರಗಾಸೆ, ಕಾರ್ಯಕರ್ತರ ಹರ್ಷೋದ್ಘಾರದ ನಡುವೆ ತಹಸೀಲ್ದಾರ್ ಕಚೇರಿಗೆ ಕರೆತರಲಾಯಿತು.
ಸಿದ್ದರಾಮಯ್ಯ ಕೂಡ ಹಿಂದೆ ನಾಮಪತ್ರ ಸಲ್ಲಿಸಬೇಕಾಗಿದ್ದರಿಂದ ಇಡೀ ಬಾದಾಮಿ ನಗರ ಕಾಂಗ್ರೆಸ್ ಮತ್ತು ಬಿಜೆಪಿ ಮಯವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ನಿನ್ನೆಯಿಂದಲೇ ಭಾರೀ ಬಿಗಿಭದ್ರತೆ ಕೈಗೊಂಡಿತ್ತು.
ತಹಸೀಲ್ದಾರ್ ಕಚೇರಿ ಸುತ್ತಮುತ್ತ 144 ಸೆಕ್ಷನ್ ಹಾಕಲಾಗಿತ್ತು. ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಸೇರಿದಂತೆ ಕೇವಲ ನಾಲ್ಕು ಮಂದಿಗೆ ಒಳ ಪ್ರವೇಶಿಸಲು ಅವಕಾಶ ನೀಡಲಾಗಿತ್ತು.