ಮೈಸೂರು, ಏ.24- ಐ ಆ್ಯಮ್ ರೆಡಿ ಟು ಫೇಸ್ ಎವೆರಿಬಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು.
ರಾಮಕೃಷ್ಣ ನಗರದಲ್ಲಿನ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿ, ನನ್ನ ಎದುರಾಳಿ ಯಾರೇ ಆದರೂ ಅವರ ವಿರುದ್ಧ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ನಿಮ್ಮನ್ನು ತಿರಸ್ಕಾರ ಮಾಡಿದ್ದಾಳೆ. ಬಾದಾಮಿಯಲ್ಲಿ ಬನಶಂಕರಿ ತಿರಸ್ಕರಿಸುತ್ತಾಳೆ ಎಂದು ಶ್ರೀರಾಮುಲು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ಯಾವ ತಿರಸ್ಕಾರವೂ ಇಲ್ಲ. ಎರಡೂ ಕ್ಷೇತ್ರಗಳಲ್ಲಿ ಜನ ನನ್ನನ್ನು ಪುರಸ್ಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ರಾಮುಲು ತಿಳಿದುಕೊಂಡು ಮಾತನಾಡಲಿ. ನಾನು 1983ರಲ್ಲಿ ಎಂಎಲ್ಎ ಆಗಿದ್ದೆ. ರಾಮುಲು ಅವರು 2004ರಲ್ಲಿ ಎಂಎಲ್ಎ ಆಗಿರುವುದು. ಹಾಗಾಗಿ ಮಾತನಾಡುವ ಮೊದಲು ಯೋಚನೆ ಮಾಡಿ ಮಾತನಾಡಲಿ ಎಂದರು.
ಯಡಿಯೂರಪ್ಪ ಅವರು ಕಳಂಕಿತ ವ್ಯಕ್ತಿ. ಜನರು ಅವರನ್ನು ಒಪ್ಪುವುದಿಲ್ಲ. ಯಡಿಯೂರಪ್ಪ ಮಗನ ವಿಷಯದಲ್ಲಷ್ಟೇ ವೀಕ್ ಅಲ್ಲ, ಎಲ್ಲ ವಿಷಯದಲ್ಲೂ ಅವರನ್ನು ವೀಕ್ ಮಾಡಲಾಗಿದೆ ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ರಾಘವೇಂದ್ರ ಅವರಿಗೆ ಬಿಜೆಪಿ ಟಿಕೆಟ್ ನೀಡಿ ಎಂಪಿ ಮಾಡಿದೆ. ಇದೀಗ ವಿಜಯೇಂದ್ರನಿಗೂ ಕೊಡಲು ಹೇಳಿತ್ತು. ಇವರು ಯಾರ ಮಗ, ಇವರದು ವಂಶ ಪಾರಂಪರ್ಯ ಅಲ್ಲವೆ ಎಂದರು.
ಸಮೀಕ್ಷೆಗಳ ಪ್ರಕಾರ, ಈಗಾಗಲೇ ಶೇ.30ರಷ್ಟು ಮಂದಿ ಸಿದ್ದರಾಮಯ್ಯ ಅವರೇ ಮತ್ತೆ ಸಿಎಂ ಆಗಲಿ ಎಂದು ಹೇಳಿದ್ದಾರೆ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಇದರ ಅರ್ಥವಲ್ಲವೆ ಎಂದರು.
ನಾನು ಸ್ಪಷ್ಟವಾಗಿ ಹೇಳುತ್ತೇನೆ. ಸಮೀಕ್ಷೆಯನ್ನು ನಾನು ನಂಬುವುದಿಲ್ಲ. ನಾನೂ ಸಹ ಸರ್ವೆ ಮಾಡಿಸಿದ್ದೇನೆ. ರಾಜ್ಯದಲ್ಲಿ ಮತ್ತೊಮ್ಮೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು ಭಾಗದಲ್ಲಿ ಬಿಜೆಪಿ ಎಲ್ಲಿದೆ? ಆಕಾಶದಿಂದ ಬೀಳಲು ಸಾಧ್ಯವೆ? ಈ ಹಿಂದೆ ಮೈಸೂರು ಮತ್ತು ಚಾಮರಾಜನಗರದ 15 ಕ್ಷೇತ್ರಗಳಲ್ಲಿ ಬಿಜೆಪಿ ಒಂದೂ ಕ್ಷೇತ್ರ ಗೆದ್ದಿಲ್ಲ. ಕೊನೆ ಪಕ್ಷ ಜೆಡಿಎಸ್ ಮೂರು ಸ್ಥಾನ ಪಡೆದುಕೊಂಡಿದೆ. ಬಿಜೆಪಿ ಅವರಿಗೆ ಅಸ್ತಿತ್ವವೇ ಇಲ್ಲ ಎಂದು ಹೇಳಿದರು. ಮೈಸೂರು-ಚಾಮರಾಜನಗರದಲ್ಲಿ ಬಿಜೆಪಿ ಪರ ಜನರಿಗೆ ಒಲವು ಇಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.