ಕಾಂಗ್ರೆಸ್ ಕಾರ್ಯಕರ್ತರಿಂದ ಶಕ್ತಿ ಪ್ರದರ್ಶನ: ಸಚಿವ, ಶಾಸಕರ ಸಾಥ್ ಬಿ. ನಾರಾಯಣರಾವ್ ನಾಮಪತ್ರ ಸಲ್ಲಿಕೆ

ಬೀದರ,ಏ.24:- ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ. ನಾರಾಯಣರಾವ್ ಮಂಗಳವಾರ ನಾಮಪತ್ರ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷ ಮೀರ್ ಅಜರ್ ಅಲಿ ಅವರೊಂದಿಗೆ ಬಸವಕಲ್ಯಾಣದ ಹಳೆಯ ತಹಶೀಲ್ದಾರ್ ಕಚೇರಿಗೆ ತೆರಳಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಬಿ. ನಾರಾಯಣರಾವ್ ಅವರು ಐತಿಹಾಸಿಕ ಕೋಟೆಯಿಂದ ಸಹಸ್ರಾರು ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಮುಖ್ಯರಸ್ತೆ ಮಾರ್ಗವಾಗಿ ಮೆರವಣಿಗೆಯಲ್ಲಿ ಅಂಬೇಡ್ಕರ್ ವೃತ್ತಕ್ಕೆ ಬಂದರು. ಅಲ್ಲಿಂದ ಕಾರಿನಲ್ಲಿ ಹಳೆಯ ತಹಶೀಲ್ದಾರ್ ಕಚೇರಿಯನ್ನು ತಲುಪಿದರು.

ಬಾಜಾ ಭಜಂತಿ, ಕಿವಿಗಡಚಿಕ್ಕುವ ಪಟಾಕಿಗಳ ಸದ್ದಿನ ನಡುವೆ ನಡೆದ ಮೆರವಣಿಗೆಯಲ್ಲಿ ಕಾರ್ಯಕರ್ತರು ಹರ್ಷೋಲ್ಲಾಸದೊಂದಿಗೆ ಪಾಲ್ಗೊಂಡಿದ್ದರು. ಕಾಂಗ್ರೆಸ್ ಪಕ್ಷದ ನಾಯಕರ ಭಾವಚಿತ್ರ ಒಳಗೊಂಡ ಪೋಸ್ಟರ್‍ಗಳನ್ನು ಅಂಟಿಸಿದ್ದ ತೆರೆದ ವಾಹನದಲ್ಲಿದ್ದ ಬಿ.

ನಾರಾಯಣರಾವ್ ಮಾರ್ಗಮಧ್ಯೆ ಮಹಾತ್ಮರ ಪ್ರತಿಮೆಗಳಿಗೆ ಹೂಮಾಲೆ ಹಾಕಿ ಗೌರವ ಸಮರ್ಪಿಸಿದರು. ಮತದಾರರಿಗೆ ಕೈಮುಗಿದು ಆಶೀರ್ವಾದ ಕೋರಿದರು. ಅನೇಕರು ಬಿ. ನಾರಾಯಣರಾವ್ ಅವರಿಗೆ ಹೂಮಾಲೆ ಹಾಕಿ ಶುಭ ಕೋರಿದರು.

ಕಾರ್ಯಕರ್ತರು ಕೈಯಲ್ಲಿ ಬಿ. ನಾರಾಯಣರಾವ್ ಭಾವಚಿತ್ರ ಹಿಡಿದುಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿ. ನಾರಾಯಣರಾವ್ ಅವರಿಗೆ ಜಯವಾಗಲಿ ಎನ್ನುವ ಘೋಷಣೆಗಳನ್ನು ಹಾಕಿದರು. ನೆತ್ತಿ ಸುಡುವ ಬಿಸಿಲಲ್ಲೂ ಹೆಜ್ಜೆ ಹಾಕಿ ಸಂಭ್ರಮಿಸಿದರು.

ತೆರೆದ ವಾಹನದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ನಗರಸಭೆ ಅಧ್ಯಕ್ಷ ಮೀರ್ ಅಜರ್ ಅಲಿ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್, ಮುಖಂಡ ಬಾಬು ಹೊನ್ನಾ ನಾಯಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ, ಕಲಬುರ್ಗಿ-ಬೀದರ-ಯಾದಗಿರಿ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ ಮತ್ತಿತರರು ಇದ್ದರು.

ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ: ನಾಮಪತ್ರ ಸಲ್ಲಿಸಿ ಹೊರ ಬಂದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕರ್ನಾಟಕ ಸಾಕ್ಷರತಾ ಮಿಷನ್ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಕಾಂಗ್ರೆಸ್ ಅಭ್ಯರ್ಥಿ ಬಿ. ನಾರಾಯಣರಾವ್, ರಾಜ್ಯದಲ್ಲಿ ಈ ಬಾರಿಯೂ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿಯುವುದು ಶತಸಿದ್ಧ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಕಾಲ ಭ್ರಷ್ಟಾಚಾರ ರಹಿತ, ಪಾರದರ್ಶಕ ಹಾಗೂ ಜನಪರ ಆಡಳಿತ ನೀಡಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯ, ಅನಿಲ ಭಾಗ್ಯ ಸೇರಿದಂತೆ ಹತ್ತು ಹಲವು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಸರ್ವ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ. ಸಿದ್ದರಾಮಯ್ಯ ಅವರ ಆಡಳಿತಕ್ಕೆ ಮನಸೋತಿರುವ ರಾಜ್ಯದ ಜನ ಅವರಿಗೆ ಮತ್ತೊಂದು ಅವಕಾಶ ಕೊಡಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯವನ್ನೇ ಬರೆದಿದೆ. ಬೀದರ ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೂ ಅಧಿಕ ಅನುದಾನ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಹೇಳಿದರು.

ಬಡ ಕುಟುಂಬದಿಂದ ಬಂದಿರುವ ನಾನು ನಾಲ್ಕೂವರೆ ದಶಕದಿಂದ ಜನ ಸೇವೆಯಲ್ಲಿದ್ದೇನೆ. ಕಳೆದ ಚುನಾವಣೆಯಲ್ಲಿ ಸೋತರೂ ಜನರಿಂದ ದೂರ ಉಳಿದಿಲ್ಲ. ಐದು ವರ್ಷಗಳ ಕಾಲ ನಿರಂತರ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ. ಕ್ಷೇತ್ರದ ಜನರಲ್ಲಿ ನನ್ನ ಬಗ್ಗೆ ಅನುಕಂಪ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಸಾಧನೆಗಳ ಬಗ್ಗೆಯೂ ತೃಪ್ತಿ ಇದೆ. ಹೀಗಾಗಿ ಕ್ಷೇತ್ರದಲ್ಲಿ ಈ ಬಾರಿ ನನ್ನ ಗೆಲುವು ನಿಶ್ಚಿತವಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ