ಬೆಂಗಳೂರು, ಏ.23- ಸ್ವಂತ ಬಲದ ಮೇಲೆ ಅಧಿಕಾರ ಗದ್ದುಗೆ ಹಿಡಿಯಲು ಹರಸಾಹಸ ಪಡುತ್ತಿರುವ ಬಿಜೆಪಿಗೆ ಎತ್ತ ನೋಡಿದರೂ ಭಿನ್ನಮತೀಯರೇ ಮುಳುವಾಗುವ ಸಾಧ್ಯತೆ ಇದೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಈವರೆಗೂ 213 ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಟಿಕೆಟ್ ಘೋಷಣೆ ಮಾಡಿದೆ. ಇನ್ನು 11 ಕ್ಷೇತ್ರಗಳು ಬಾಕಿ ಉಳಿದಿದೆ.
ಈಗಾಗಲೇ ಘೋಷಣೆ ಮಾಡಿರುವ ಕ್ಷೇತ್ರಗಳಲ್ಲೇ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಭಿನ್ನಮತಿಯರು ಸ್ಫರ್ಧಿಸಿರುವುದು ಕಮಲ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮೊದಲು ಭಿನ್ನಮತೀಯರನ್ನು ಮಾತುಕತೆಗೆ ಕರೆದು ಮಾತನಾಡುವ ಸೌಜನ್ಯವನ್ನು ತೋರಲಿಲ್ಲ. ಟಿಕೆಟ್ ವಂಚಿತರು ಎಲ್ಲಿಗೂ ಹೋಗದೆ ಪಕ್ಷದಲ್ಲೇ ಉಳಿದು ಅಭ್ಯರ್ಥಿಗೆ ನೀಡುತ್ತಾರೆಂಬ ಲೆಕ್ಕಾಚಾರದಲ್ಲಿದ್ದರು ಬಿಜೆಪಿ ನಾಯಕರು.
ತಮಗೆ ಟಿಕೆಟ್ ಕೈ ತಪ್ಪಲು ಕಾರಣರಾದವರಿಗೆ ನಾವು ಏಕೆ ಬೆಂಬಲ ನೀಡಬೇಕೆಂದು ಕೆಲವರು ಪಕ್ಷಬಿಟ್ಟು ಅನ್ಯ ಪಕ್ಷಗಳತ್ತ ಮುಖ ಮಾಡಿದರು. ಉಳಿದವರು ಭಿನ್ನಮತೀಯರಾಗಿಯೇ ಕಣದಲ್ಲಿ ಉಳಿದಿರುವುದರಿಂದ ಕಮಲದ ಅಭ್ಯರ್ಥಿಗಳಿಗೆ ಬಿಸಿತುಪ್ಪವಾಗುತ್ತಿದ್ದಾರೆ.
ಸುಮಾರು 15ರಿಂದ 20 ಕ್ಷೇತ್ರಗಳಲ್ಲಿ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಭಿನ್ನಮತೀಯರು ಕಣಕ್ಕಿಳಿದಿರುವುದರಿಂದ ಅಭ್ಯರ್ಥಿಗಳ ಗೆಲುವಿಗೆ ಇವರೇ ಮುಳುವಾಗುವ ಸಾಧ್ಯತೆ ಸ್ಪಷ್ಟವಾಗುತ್ತಿದೆ.
ಎಲ್ಲೆಲ್ಲಿ ಬಂಡಾಯ :
ಶಿವಮೊಗ್ಗ ಜಿಲ್ಲೆಯ ಸಾಗರ, ಶಿವಮೊಗ್ಗ ಗ್ರಾಮಾಂತರ, ದಾವಣಗೆರೆಯ ಮಾಯಕೊಂಡ, ಹರಪನಹಳ್ಳಿ , ತುಮಕೂರು ನಗರ, ಕಲಬುರಗಿ ಗ್ರಾಮೀಣ, ಬೆಂಗಳೂರಿನ ರಾಜರಾಜೇಶ್ವರಿನಗರ, ಚಿಕ್ಕಪೇಟೆ, ಚಿತ್ರದುರ್ಗದ ಮೊಳಕಾಲ್ಮೂರು, ಮೈಸೂರಿನ ಚಾಮರಾಜ, ಹುಬ್ಬಳ್ಳಿ ಧಾರವಾಡದ ಪೂರ್ವ, ಬಿಜಾಪುರದ ನಾಗಾಠಾಣಾ, ಬಸವನಕಲ್ಯಾಣ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ, ಮಂಗಳೂರು ಉತ್ತರ, ದಾವಣಗೆರೆಯ ಹರಿಹರ ಸೇರಿದಂತೆ 20 ಕ್ಷೇತ್ರಗಳಲ್ಲಿ ಭಿನ್ನಮತೀಯರು ಸೆಡ್ಡು ಹೊಡೆದಿದ್ದಾರೆ.
ರಾಷ್ಟ್ರ ಇಲ್ಲವೇ ರಾಜ್ಯ ನಾಯಕರು ಪ್ರಾರಂಭದಲ್ಲೇ ಭಿನ್ನಮತವನ್ನು ಚಿವುಟಿ ಹಾಕಿದ್ದರೆ ಪರಿಸ್ಥಿತಿ ವಿಕೋಪ ತಿರುಗುತ್ತಿರಲಿಲ್ಲ. ಯಾವ ಯಾವ ಕ್ಷೇತ್ರಗಳಲ್ಲಿ ಟಿಕೆಟ್ ಕೈ ತಪ್ಪಿತೋ ಅಂತಹ ಕಡೆ ಕರೆದು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು. ಯಾವುದೇ ಕಾರಣಕ್ಕೂ ಭಿನ್ನಮತ ಸಾರದಂತೆ ಮನವೊಲಿಸಿದ್ದರೆ ಸಂಧಾನ ಯಶಸ್ವಿಯಾಗಬಹುದಿತ್ತೇನೋ.
ಆದರೆ ಇವರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದರಿಂದಲೇ ಭಿನ್ನಮತೀಯರು ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ತೊಡೆ ತಟ್ಟಿದ್ದಾರೆ. ಸಾಗರದಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಟಕೆಟ್ ಕೈ ತಪ್ಪಿದ್ದರಿಂದ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದ್ದಾರೆ.
ಇದುವರೆಗೂ ಯಾರ ವಿರುದ್ಧ ತೊಡೆ ತಟ್ಟಿ ರಾಜಕಾರಣ ನಡೆಸಿದ್ದಾರೋ ಈಗ ಅವರ ಪರವಾಗಿಯೇ ಸಾಗರದಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ. ಇದು ಬಿಜೆಪಿ ಅಭ್ಯರ್ಥಿ ಹರತಾಳ್ ಹಾಲಪ್ಪಗೆ ಮುಳುವಾಗುವ ಸಾಧ್ಯತೆ ಇದೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಯಾಗಿದ್ದ ಕುಮಾರಸ್ವಾಮಿಗೆ ಟಿಕೆಟ್ ನಿರಾಕರಿಸಿ ಅಶೋಕ್ ನಾಯ್ಕ ಎಂಬುವರಿಗೆ ಟಿಕೆಟ್ ನೀಡಲಾಗಿದೆ. ಇಲ್ಲಿಯೂ ಕೂಡ ಭಿನ್ನಮತ ಜೋರಾಗಿದೆ. ಹರಿಹರದಲ್ಲಿ ದೇವೇಂದ್ರಪ್ಪ , ಮಾಯಕೊಂಡದಲ್ಲಿ ಬಸವರಾಜ ನಾಯ್ಕ, ಹರಪನಹಳ್ಳಿ ಕೊಟ್ರೇಶ್ ಬಂಡಾಯವೆದ್ದಿದ್ದಾರೆ.
ಕಲ್ಬುರ್ಗಿ ಗ್ರಾಮೀಣ ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದ ರೇವು ನಾಯಕ ಬೆಳಮಗಿ ಬಿಜೆಪಿ ಬಿಟ್ಟು ಜೆಡಿಎಸ್ಗೆ ಸೇರ್ಪಡೆಯಾಗಿದ್ದಾರೆ. ಬಿಜಾಪುರ ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ ಕಟಕದೋಂಡ ನಾಗಾಠಾಣಾ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಆದರೆ ಕೇಂದ್ರ ವರಿಷ್ಠರು ಈ ಕ್ಷೇತ್ರದಿಂದ ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಪುತ್ರ ಗೋಪಾಲ ಕಾರಜೋಳಗೆ ಟಿಕೆಟ್ ನೀಡಿದೆ. ಪರಿಣಾಮ ಕಟಕದೋಂಡ ಕಮಲ ಬಿಟ್ಟು ಕೈ ಹಿಡಿದರು.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಆಕಾಂಕ್ಷಿಯಾಗಿದ್ದ ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರ ಜೆಡಿಎಸ್ಗೆ ಸೇರಿದರೆ ಚಿಕ್ಕಪೇಟೆಯಲ್ಲಿ ಮಾಜಿ ಶಾಸಕ ಡಾ.ಹೇಮಚಂದ್ರ ಸಾಗರ್ ಕೂಡ ಬಿಜೆಪಿಗೆ ಸೋಡಾ ಚೀಟಿ ನೀಡಿದರು.
ಹೀಗೆ 15ರಿಂದ 20 ಕ್ಷೇತ್ರಗಳಲ್ಲಿ ಬಿಜೆಪಿಯ ರೆಬೆಲ್ಗಳೇ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿಯಾಗಿ ಪರಿಣಮಿಸಿದ್ದಾರೆ.