ನವದೆಹಲಿ, ಏ.23-ಮಹತ್ವಾಕಾಂಕ್ಷಿಯ 800 ಕೋಟಿ ರೂ. ವೆಚ್ಚದ ಚಂದ್ರಯಾನ್-2 ಯೋಜನೆಗೆ ಅಕ್ಟೋಬರ್ನಲ್ಲಿ ಚಾಲನೆ ನೀಡಲು ಸಿದ್ದತೆಗಳನ್ನು ನಡೆಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮುಂಬರುವ ತಿಂಗಳಲ್ಲಿ ಪ್ರಮುಖ ಉಪಗ್ರಹಗಳ ಉಡಾವಣೆಗೆ ಸಜ್ಜಾಗುತ್ತಿದೆ.
ನೆರೆ ಹೊರೆಯಲ್ಲಿರುವ ವೈರಿ ರಾಷ್ಟ್ರಗಳ ಮೇಲೆ ನಿಗಾ ಇಡಲು ಹಾಗೂ ನಮ್ಮ ಭೂಮಿ ಮತ್ತು ಸಾಗರ ಗಡಿ ಪ್ರದೇಶಗಳನ್ನು ರಕ್ಷಿಸಲು ಸೇನೆಗೆ ನೆರವಾಗುವ ಮಹತ್ವದ ಉಪಗ್ರಹಗಳ ಉಡಾವಣೆಗಳೂ ಈ ಯೋಜನೆಗಳಲ್ಲಿ ಸೇರಿವೆ.
ಭಾರತೀಯ ವಾಯು ಪಡೆ(ಐಎಎಫ್)ಗಾಗಿ ಜಿಸ್ಯಾಟ್-7ಎ ಉಪಗ್ರಹವನ್ನು ಸೆಪ್ಟೆಂಬರ್ ತಿಂಗಳಲ್ಲಿ ಇಸ್ರೋ ಉಡಾಯನ ಮಾಡಲಿದೆ. ಈ ವರ್ಷಾಂತ್ಯದ ವೇಳೆಗೆ ಕಣ್ಗಾವಲು ಉದ್ದೇಶಕ್ಕಾಗಿ ರಿಸ್ಯಾಟ್-2ಎ ಎಂಬ ಸುಧಾರಿತ ದೂರ ಸಂವೇದಿ ಉಪಗ್ರಹವನ್ನು ಸಹ ನಭಕ್ಕೆ ಚಿಮ್ಮಿಸಲಿದೆ.
ಜಿಎಸ್ಎಲ್ವಿ ಎಂಕೆ-2 ರಾಕೆಟ್ನಿಂದ ಉಡ್ಡಯನವಾಗಲಿರುವ ಜಿಸ್ಯಾಟ್-7ಎ ಉಪಗ್ರಹವು ವಿವಿಧ ಭೂ ರೇಡಾರ್ ಕೇಂದ್ರಗಳು, ವಾಯು ನೆಲೆಗಳು ಮತ್ತು ಎಡಬ್ಲ್ಯುಎಸಿಎಸ್ ವಿಮಾನದೊಂದಿಗೆ ಅಂತರ್-ಸಂಪರ್ಕ ಹೊಂದಲು ನೆರವಾಗಲಿದೆ. ಅಲ್ಲದೇ ಐಎಎಫ್ನ ಜಾಲ ಕೇಂದ್ರೀಕೃತ ಸಮರ ಸಾಮಥ್ರ್ಯಗಳನ್ನು ವೃದ್ದಿಸಿ ಜಾಗತಿಕ ಕಾರ್ಯಾಚರಣೆಗಳನ್ನು ಸುಧಾರಿಸಲು ಸಹಕಾರಿಯಾಗಲಿದೆ.
ಈ ಉಪಗ್ರಹವು ಜಿಸ್ಯಾಟ್-7 ಅಥವಾ ರುಕ್ಮಿಣಿ ಸ್ಯಾಟಿಲೈಟ್ನನ್ನು ಹೋಲುತ್ತದೆ. ಇದನ್ನು 2013ರಲ್ಲಿ ನೌಕಾ ಪಡೆಗಾಗಿ ಉಡಾವಣೆ ಮಾಡಲಾಗಿತ್ತು.