ಬೀಜಿಂಗ್, ಏ.23-ಭಾರತೀಯರು ಮತ್ತು ಚೀನಿಯರು ಪರಸ್ಪರ ಭಾಷೆಗಳನ್ನು ಕಲಿಯಬೇಕು. ಇದರಿಂದ ಸಂವಹನ ತೊಡಕುಗಳು ನಿವಾರಣೆಯಾಗಿ ಉಭಯ ದೇಶಗಳ ನಡುವೆ ಸಂಬಂಧ ಮತ್ತಷ್ಟು ಬಲವರ್ಧನೆಯಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸಲಹೆ ಮಾಡಿದ್ದಾರೆ.
ಚೀನಾ ಪ್ರವಾಸದಲ್ಲಿರುವ ಸುಷ್ಮಾ ರಾಜಧಾನಿ ಬೀಜಿಂಗ್‍ನಲ್ಲಿ ಭಾರತೀಯ ರಾಯಭಾರಿ ಕಚೇರಿ ಆಯೋಜಿಸಿದ್ದ ಭಾರತ-ಚೀನಾ ಸ್ನೇಹಸಂಬಂಧದಲ್ಲಿ ಹಿಂದಿ ಕೊಡುಗೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಬ್ಬರು ಗೆಳೆಯರು ಒಟ್ಟಿಗೆ ಕುಳಿತಾಗ ಅವರೇನು ಮಾಡುತ್ತಾರೆ? ಅವರು ತಮ್ಮ ಹೃದಯದಿಂದ ಮಾತನಾಡಲು ಬಯಸುತ್ತಾರೆ, ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ ಅಲ್ಲವೇ. ಇದಕ್ಕೆ ಒಂದು ಭಾಷೆಯ ಅಗತ್ಯವಿದೆ. ನೀವು ಮಾತನಾಡಿದಾಗ ನಾನು ಚೀನಿ ಭಾಷೆ ಅರ್ಥ ಮಾಡಿಕೊಳ್ಳುವಂತಾಗಬೇಕು. ಅದೇ ರೀತಿ ನಾನು ಮಾತನಾಡುವಾಗ ನಿಮಗೆ ಹಿಂದಿ ಅರ್ಥವಾಗಬೇಕು ಎಂದು ಸುಷ್ಮಾ ಹೇಳಿದರು.
ಭಾಷೆ ಬಾರದ ಇಬ್ಬರು ಸ್ನೇಹಿತರ ನಡುವೆ ದುಭಾಷಿ(ಅನುವಾದಕ) ಇದ್ದರೆ, ಆತನ ಪದಗಳನ್ನು ಅನುವಾದ ಮಾಡಬಹುದು. ಆದರೆ ಮನಸ್ಸಿನ ಭಾವನೆಗಳನ್ನು ತಿಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಉಭಯತ್ರರು ಪರಸ್ಪರ ಭಾಷೆಗಳನ್ನು ಕಲಿಯುವ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.