ನವದೆಹಲಿ,ಏ.23-ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಾಗ್ದಂಡನೆ(ಮಹಾಭಿಯೋಗ)ಗಾಗಿ ಕಾಂಗ್ರೆಸ್ ನೇತೃತ್ವದ ಏಳು ವಿರೋಧ ಪಕ್ಷಗಳು ನೀಡಿದ್ದ ನಿಲುವಳಿ ನೋಟಿಸ್ನನ್ನು ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿ ಡಾ. ಎಂ.ವೆಂಕಯ್ಯನಾಯ್ಡು ಇಂದು ತಿರಸ್ಕರಿಸಿರುವುದನ್ನು ಬಿಜೆಪಿ ಸ್ವಾಗತಿಸಿದೆ. ಇದೇ ವೇಳೆ ಇದಕ್ಕೆ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬಿಜೆಪಿ ಮುಖಂಡ ಮತ್ತು ರಾಜ್ಯಸಭೆ ಸದಸ್ಯ ಡಾ.ಸುಬ್ರಮಣಿಯನ್ ಸ್ವಾಮಿ, ನಾಯ್ಡು ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ನೋಟಿಸ್ನಲ್ಲಿರುವ ಅಂಶಗಳು ಸಾರ್ವಜನಿಕವಾಗಿ ಬಹಿರಂಗವಾದ ಹಿನ್ನೆಲೆಯಲ್ಲಿ ಈ ಮನವಿಯನ್ನು ಸ್ವೀಕರಿಸಿದ ದಿನವೇ ಸಭಾಪತಿಯವರು ತಿರಸ್ಕರಿಸಬಹುದಾಗಿತ್ತು ಎಂದು ಹೇಳಿದ್ದಾರೆ.
ಮಾಜಿ ಅಟಾರ್ನಿ ಜನರಲ್ ಸೋಲಿ ಸೋರಾಬ್ಜಿ ಪ್ರತಿಕ್ರಿಯೆ ನೀಡಿ, ನಾಯ್ಡು ನಿರ್ಧಾರವನ್ನು ಸ್ವಾಗತಿಸಿದ್ದಾರೆ. ರಾಜ್ಯಸಭೆ ಅಧ್ಯಕ್ಷರು ಚೆನ್ನಾಗಿ ಆಲೋಚಿಸಿ ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಕಾಂಗ್ರೆಸ್ ನೋಟಿಸ್ ವಿರುದ್ಧ ಕೋರ್ಟ್ಗೆ ಮೊರೆ ಹೋಗಿದ್ದ ವರುಣ್ ಕುಮಾರ್ ಸಿನ್ಹಾ, ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸೇರಿದಂತೆ ಅನೇಕರು ನೋಟಿಸ್ ತಿರಸ್ಕøತಗೊಂಡಿರುವುದನ್ನು ಸ್ವಾಗತಿಸಿದ್ದಾರೆ.
ಆದರೆ, ಮನವಿ ತಿರಸ್ಕøತಗೊಂಡಿರುವ ಬಗ್ಗೆ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಎಐಸಿಸಿ ಮಾಧ್ಯಮ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲ ಇದೊಂದು ಪ್ರಜಾಪ್ರಭುತ್ವ ಹರಣ ಧೋರಣೆಯಾಗಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕ ಪಿ.ಎಲ್.ಪುನಿಯ ಪ್ರತಿಕ್ರಿಯೆ ನೀಡಿ, ಕಾನೂನು ತಜ್ಞರೊಂದಿಗೆ ಚರ್ಚಿಸಿ ಪಕ್ಷ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.