ನವದೆಹಲಿ, ಏ.22-ಕತುವಾ ಪ್ರಕರಣ ಸೇರಿದಂತೆ ಭಾರತದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಮಕ್ಕಳ ಮೇಲಿನ ಸರಣಿ ಅತ್ಯಾಚಾರ ಮತ್ತು ಕಗ್ಗೊಲೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಶ್ವದ 600ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಮತ್ತು ವಿದ್ವಾಂಸರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಅಲ್ಲದೆ ಪ್ರಧಾನಿ ಅವರ ದೀರ್ಘ ಮೌನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಷ್ಠಿತ ನ್ಯೂಯಾರ್ಕ್, ಬ್ರೌನ್, ಹಾವರ್ಡ್, ಕೊಲಂಬಿಯಾ ವಿಶ್ವವಿದ್ಯಾಲಯಗಳು ಹಾಗೂ ಐಐಟಿ ಸಂಸ್ಥೆಗಳ ಖ್ಯಾತ ಶಿಕ್ಷಣ ತಜ್ಞರು ಮತ್ತು ವಿದ್ವಾಂಸರು ಮೋದಿಗೆ ಪತ್ರ ಬರೆದಿದ್ದು, ಕತುವಾ ಮತ್ತು ಉನ್ನಾವೋ ಅತ್ಯಾಚಾರ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರಿಗೆ ನಿರ್ದಿಷ್ಟ ಭರವಸೆ ನೀಡಿದ ಹಾಗೂ ಈ ಪ್ರಕರಣಗಳ ಬಗ್ಗೆ ಮೌನ ವಹಿಸಿರುವ ಪ್ರಧಾನಿ ಧೋರಣೆಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕತುವಾ ಮತ್ತು ಉನ್ನಾವೋ ಪ್ರಕರಣ ಹಾಗೂ ಈ ಕೃತ್ಯಗಳು ನಡೆದ ನಂತರ ದುಷ್ಕರ್ಮಿಗಳನ್ನು ರಕ್ಷಿಸಲು ಆಯಾ ರಾಜ್ಯ ಸರ್ಕಾರಗಳು ಮುಂದಾಗಿರುವ ವಿದ್ಯಮಾನಗಳ ಬಗ್ಗೆ ನಾವು ಆಕ್ರೋಶ ಮತ್ತು ಆತಂಕ ವ್ಯಕ್ತಪಡಿಸಲು ಬಯಸಿದ್ದೇವೆ. ಇವು ಅತ್ಯಂತ ಹೇಯ ಮತ್ತು ಪಾಶವೀ ಕೃತ್ಯಗಳು ಎಂದು ಶಿಕ್ಷಣ ತಜ್ಞರು ಮತ್ತು ವಿದ್ವಾಂಸರು ಪತ್ರಗಳಲ್ಲಿ ಆರೋಪಿಸಿದ್ದಾರೆ. ಈ ಕೃತ್ಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೀರ್ಘ ಮೌನ ಧೋರಣೆ ಅನುಸರಿಸಿದ ಬಗ್ಗೆಯೂ ಪತ್ರದಲ್ಲಿ ಆಕ್ಷೇಪಿಸಿದ್ದಾರೆ.