ಬೆಂಗಳೂರು, ಏ.21-ಬಿಜೆಪಿ ಟಿಕೆಟ್ ವಂಚಿತ ಸಾಗರದ ಬೇಳೂರು ಗೋಪಾಲಕೃಷ್ಣ ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದು, ಇಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಕೊನೆ ಕ್ಷಣದಲ್ಲಿ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೇಸರಗೊಂಡ ಅವರು, ಬಿಜೆಪಿ ಪಕ್ಷ ತೊರೆದಿದ್ದು, ಪಕ್ಷೇತರವಾಗಿ ಸ್ಫರ್ಧಿಸಲು ನಿರ್ಧರಿಸಿದ್ದರು. ಆದರೆ ಸ್ವತಂತ್ರವಾಗಿ ಸ್ಪರ್ಧಿಸುವುದು ಬೇಡ ಎಂದು ತೀರ್ಮಾನಿಸಿದ್ದು, ಸಾಗರ ಕ್ಷೇತ್ರದಲ್ಲಿ ತಮ್ಮ ಮಾವನವರಾದ ಕಾಂಗ್ರೆಸ್‍ನ ಕಾಗೋಡು ತಿಮ್ಮಪ್ಪ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಅಲ್ಲದೆ, ಈ ಭಾಗದಲ್ಲಿ ಈಡಿಗ ಸಮುದಾಯವನ್ನು ಸಂಘಟಿಸಿ ಕಾಂಗ್ರೆಸ್ ಬಲಪಡಿಸಲು ತೀರ್ಮಾನಿಸಿದ್ದು, ಇಂದು ಈ ಕುರಿತು ಬಿ.ಕೆ.ಹರಿಪ್ರಸಾದ್ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಬಂಗಾರಪ್ಪ ಅವರ ಶಿಷ್ಯರಾಗಿದ್ದ ಬೇಳೂರು ಗೋಪಾಲಕೃಷ್ಣ ಅವರು ಸಾಗರ ಕ್ಷೇತ್ರದಲ್ಲಿ ಪ್ರಭಾವಿಯುವ ನಾಯಕರಾಗಿ ಹೊರಹೊಮ್ಮಿದ್ದರು.
ಈಗ ಬಿಜೆಪಿ ಅವರ ಮನವೊಲಿಸುವ ಪ್ರಯತ್ನ ನಡೆಸಿತ್ತಾದರೂ ಫಲ ನೀಡಿರಲಿಲ್ಲ. ಈಗ ಅವರು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಜೊತೆ ಬೇಳೂರು ಗೋಪಾಲಕೃಷ್ಣ ಕೈ ಜೋಡಿಸಿದರೆ ಕಾಗೋಡು ತಿಮ್ಮಪ್ಪ ಅವರ ಗೆಲುವಿಗೆ ಹೆಚ್ಚಿನ ಸಹಕಾರವಾಗುತ್ತದೆ.