ಬರ್ಲಿನ್, ಏ.21-ಜರ್ಮನ್ ಚಾನ್ಸುಲರ್ ಏಂಜೆಲಾ ಮಾರ್ಕೆಲ್ ಅವರೊಂದಿಗೆ ತಾವು ಮಹತ್ವದ ಸಭೆ ನಡೆಸಿದ್ದು, ಅವರೊಂದಿಗೆ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಕುರಿತು ಗಹನ ಚರ್ಚೆ ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮೋದಿ, ಜರ್ಮನ್ ಚಾನ್ಸುಲರ್ ಅವರ ಜೊತೆ ನಡೆದ ಮಾತುಕತೆ ಫಲಪ್ರದವಾಗಿದೆ ಎಂದು ತಿಳಿಸಿದ್ದಾರೆ.
ಕಾಮನ್‍ವೆಲ್ತ್ ಮುಖ್ಯಸ್ಥರ ಶೃಂಗಸಭೆಯಲ್ಲಿ ಭಾಗವಹಿಸಿ ವಿಶ್ವ ನಾಯಕರೊಂದಿಗೆ ಸರಣಿ ದ್ವಿಪಕ್ಷೀಯ ಸಭೆಗಳನ್ನು ನಡೆಸಿ ಬ್ರಿಟನ್ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಮೋದಿ ಜರ್ಮನ್ ರಾಜಧಾನಿ ಬರ್ಲಿನ್‍ಗೆ ತೆರಳಿ ಚಾನ್ಸುಲರ್ ಏಂಜೆಲಾ ಮಾರ್ಕೆಲ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಇದು ಮೋದಿ ಅವರ ಯುಕೆ, ಸ್ವೀಡನ್ ಮತ್ತು ಜರ್ಮನಿ-ಈ ಮೂರು ರಾಷ್ಟ್ರಗಳ ಪ್ರವಾಸದ ಮೂರನೇ ಮತ್ತು ಕೊನೆ ಹಂತ.
ಪ್ರಧಾನಿ ಮೋದಿ ಮತ್ತು ಚಾನ್ಸುಲರ್ ಮಾರ್ಕೆಲ್ ಅವರು ಭಾರತ ಮತ್ತು ಜರ್ಮನ್ ಸಹಕಾರ ಬಲವರ್ಧನೆ ಮತ್ತು ಜಾಗತಿಕ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಪಟ್ಟ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿದರು. ಮೋದಿ ಅವರ ಭೇಟಿಯು ಮಹತ್ವದ ಸಹಭಾಗಿತ್ವ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವಲ್ಲಿ ಸಫಲವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.