ಮಾರಕ ಅಣ್ವಸ್ತ್ರ ಅಥವಾ ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ಅಥವಾ ಪ್ರಯೋಗಗಳನ್ನು ನಡೆಸುವುದಿಲ್ಲ – ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್

ಸಿಯೋಲ್, ಏ.21-ವಿಶ್ವಸಂಸ್ಥೆ ಮತ್ತು ಅಮೆರಿಕದ ಗಂಭೀರ ಎಚ್ಚರಿಕೆ ನಡುವೆಯೂ ಜಗ್ಗದೇ ಪುನರಾವರ್ತಿತ ವಿನಾಶಕಾರಿ ಅಣ್ವಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಪರೀಕ್ಷಿಸುತ್ತಾ ಜಗತ್ತಿನಲ್ಲಿ ಗಂಡಾಂತರದ ಆತಂಕ ಸೃಷ್ಟಿಸಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಹತ್ವದ ಬೆಳವಣಿಗೆಯೊಂದರಲ್ಲಿ ತಮ್ಮ ಹಠಮಾರಿತನ ಬಿಟ್ಟಿದ್ದಾರೆ.
ಇನ್ನು ಮುಂದೆ ಮತ್ತೆ ಮಾರಕ ಅಣ್ವಸ್ತ್ರ ಅಥವಾ ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ಅಥವಾ ಪ್ರಯೋಗಗಳನ್ನು ನಡೆಸುವುದಿಲ್ಲ. ಅವುಗಳನ್ನು ನಾನು ನಿಲ್ಲಿಸುತ್ತೇನೆ ಎಂದು ಕಿಮ್ ವಾಗ್ದಾನ ನೀಡಿದ್ದಾರೆ.
ಅಮೆರಿಕದೊಂದಿಗೆ ಬಹು ನಿರೀಕ್ಷಿತ ಮಾತುಕತೆಗೆ ಮುನ್ನವೇ ಕಿಮ್ ನೀಡಿರುವ ಈ ಆಶ್ವಾಸನೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಿಸಿದ್ದಾರೆ. ವಿಶ್ವ ಸಂಸ್ಥೆ ಸೇರಿದಂತೆ ವಿವಿಧ ರಾಷ್ಟ್ರಗಳು ಕಿಮ್ ಹೇಳಿಕೆಗೆ ಮೆಚ್ಚುಗೆ ಸೂಚಿಸಿವೆ. ಭಾರತ ಸೇರಿದಂತೆ ಏಷ್ಯಾ ದೇಶಗಳು ಸ್ವಾಗತಿಸಿವೆ.
ಉತ್ತರ ಕೊರಿಯಾ ಅಣ್ವಸ್ತ್ರ ನಿಶ್ಶಸ್ತ್ರೀಕರಣಗೊಳಿಸಬೇಕು ಎಂದು ಅಮೆರಿಕ ಸೇರಿದಂತೆ ವಿಶ್ವದ ಅನೇಕ ದೇಶಗಳು ದೀರ್ಘ ಕಾಲದಿಂದಲೂ ಒತ್ತಾಯಿಸುತ್ತಲೇ ಬಂದಿತ್ತು. ಉತ್ತರ ಕೊರಿಯಾದ ಅಣ್ವಸ್ತ್ರ ಮತ್ತು ಕ್ಷಿಪಣಿಗಳ ಪ್ರಯೋಗ ಅದರ ನೆರೆ ರಾಷ್ಟ್ರ ದಕ್ಷಿಣ ಕೊರಿಯಾಕ್ಕೆ ಆತಂಕ ಸೃಷ್ಟಿಸಿತ್ತು.
ಉತ್ತರ ಕೊರಿಯಾ ನಾಯಕ ಕಿಮ್ ಈಗ ಈ ಘೋಷಣೆ ಮಾಡಿರುವುದರಿಂದ ವಿಶ್ವ ಸಮುದಾಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಮುಂದಿನ ರಾಜತಾಂತ್ರಿಕ ಮಾತುಕತೆಗಳಿಗೆ ಹಾದಿ ಸುಗಮವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ